ಹಾಸನ: ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ 208ನೇ ವರ್ಷದ ವಿಜಯೋತ್ಸವವನ್ನು ಮುಂದಿನ ಜ. 20 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಹೆಚ್.ಕೆ.ಸಂದೇಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ ನಗರದ ಪ್ರಜಾಸೌಧದ ಹತ್ತಿರ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಿದ್ಧನಾಕ (ಡಾ.ಭೀಮ್‌ರಾವ್ ಅಂಬೇಡ್ಕರ್ ಅವರ ಮೊಮ್ಮಗ) ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭೀಮಾ ಕೋರೆಂಗಾವ್ ಯುದ್ಧದ ಐತಿಹಾಸಿಕ ಹಿನ್ನೆಲೆ, ಪರಿಶಿಷ್ಟ ಸಮುದಾಯಗಳ ತ್ಯಾಗ-ಬಲಿದಾನ ಹಾಗೂ ಶಿಕ್ಷಣದ ಹಕ್ಕು ಪಡೆಯುವ ಹೋರಾಟದ ಮಹತ್ವದ ಕುರಿತು ಸಂದೇಶ ನೀಡಲಿದ್ದಾರೆ ಎಂದರು.
ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಅದರ ಪುನರ್ ನಿರ್ಮಾಣಕ್ಕೆ ಇತಿಹಾಸದ ಅರಿವು ಅಗತ್ಯ ಎಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂದೇಶವನ್ನು ವಿಜಯೋತ್ಸವದ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಮಹಾನ್ ಸಮುದಾಯದ ಸೈನಿಕರು ಭೀಮಾ ಕೋರೆಂಗಾವ್ ಯುದ್ಧದಲ್ಲಿ ತೋರಿದ ಶೌರ್ಯ, ತ್ಯಾಗ ಹಾಗೂ ಬಲಿದಾನವೇ ಪರಿಶಿಷ್ಟ ಸಮುದಾಯಗಳಿಗೆ ಶಿಕ್ಷಣದ ದಾರಿ ತೆರೆದ ಐತಿಹಾಸಿಕ ಘಟನೆ ಎಂದು ತಿಳಿಸಿದರು.
1817 ಡಿ.31 ರಂದು ಆರಂಭಗೊಂಡು 1818, ಜ.1 ರಂದು ಅಂತ್ಯಗೊಂಡ ಭೀಮಾ ಕೋರೆಂಗಾವ್ ಯುದ್ಧದಲ್ಲಿ, ಪೇಶ್ವೆ ಬಾಜಿರಾಯನ ಸೈನ್ಯವನ್ನು ಮಹಾರ್ ಸೈನಿಕರು ಸೋಲಿಸಿ ವಿಜಯ ಸಾಧಿಸಿದ್ದರು. ಈ ವಿಜಯದ ಸ್ಮರಣಾರ್ಥ 1823ರಲ್ಲಿ ಬ್ರಿಟಿಷ್ ಸರ್ಕಾರ 75ಅಡಿ ಎತ್ತರದ ವಿಜಯ ಸ್ತಂಭ ನಿರ್ಮಿಸಿದ್ದು, ಯುದ್ಧದಲ್ಲಿ ಹುತಾತ್ಮರಾದ 22 ಸೈನಿಕರ ಹೆಸರುಗಳನ್ನು ಅದರಲ್ಲಿ ಕೆತ್ತಲಾಗಿದೆ ಎಂದರು.
ಈ ಐತಿಹಾಸಿಕ ವಿಜಯ ಸ್ಮರಿಸುವ ಉದ್ದೇಶದಿಂದ ಪರಿಶಿಷ್ಟ ಸಮುದಾಯಗಳ ಒಕ್ಕೂಟದ ಮೂಲಕ ೨೦೮ನೇ ವಿಜಯೋತ್ಸವ ಆಯೋಜಿಸಲಾಗುತ್ತಿದ್ದು, ಸಮುದಾಯದ ಜನರು ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಂಗವಾಗಿ ರೈಲ್ವೆ ನಿಲ್ದಾಣ ವೃತ್ತದಿಂದ ಡಿ.ಜೆ. ಸೌಂಡ್ಸ್ನೊಂದಿಗೆ ಬೃಹತ್ ಕಲಾತಂಡಗಳ ಮೆರವಣಿಗೆ ಇರಲಿದೆ ಎಂದರು.
ಭಾರತೀಯ ಭೌದ್ಧ ಮಹಾಸಭಾ, ದಲಿತ ಸಮನ್ವಯ ಸಮಿತಿ, ದಲಿತ ನೌಕರರ ಸಮನ್ವಯ ಸಮಿತಿ, ಅಧಿಕಾರಿಗಳು ಮತ್ತು ನಿವೃತ್ತ ಅಧಿಕಾರಿಗಳ ಸಂಘ, ಹಾಸನ ಎಸ್.ಸಿ/ಎಸ್.ಟಿ ವಕೀಲರು, ಕೆಪಿಟಿಸಿಎಲ್ ನೌಕರರ ಒಕ್ಕೂಟ, ಎಸ್.ಸಿ/ಎಸ್.ಟಿ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ, ಎಸ್.ಸಿ/ಎಸ್.ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಭೌದ್ಧ ಅಧ್ಯಯನ ಕೇಂದ್ರ, ಜಿಲ್ಲೆಯ ಎಲ್ಲಾ ಭೌದ್ಧ ವಿಹಾರಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಎಸ್.ಸಿ/ಎಸ್.ಟಿ ಗುತ್ತಿಗೆದಾರರ ಒಕ್ಕೂಟ ಸೇರಿ ಹಲವು ಸಂಘಟನೆಗಳು ಸಹಭಾಗಿತ್ವ ವಹಿಸಿವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆತ್ತೂರ್ ನಾಗರಾಜ್, ಅಂಬುಗ ಮಲ್ಲೇಶ್, ಉಮೇಶ್, ಮಂಜು ತೇಜೂರ್, ಗೊರೂರು ರಾಜು, ಶಿವಮ್ಮ, ಭಾಗ್ಯ ಕಲಿವೀರ್, ರಾಜು ಗೊರೂರ್, ವೆಂಕಟೇಶ್ ಬ್ಯಾಕರವಳ್ಳಿ ಇದ್ದರು.
The 208th anniversary celebration of the Bhima Korengaon Victory Celebration Committee will be held in the city on January 20, said committee president H.K. Sandesh.










