ಹಾಸನ: ಬಿಜೆಪಿ ವಿರುದ್ಧ ಲಘು ಹೇಳಿಕೆ- ರೇವಣ್ಣ ಬಹಿರಂಗ ಕ್ಷಮೆಯಾಚಿಸಬೇಕು – ದೇವರಾಜೇಗೌಡ

BJP leader and lawyer Devaraj Gowda demanded that former minister H.D. Revanna's statement, which spoke lightly about the BJP in the House despite the BJP-JDS alliance, is condemnable and he should publicly apologize.

ಹಾಸನ: ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ ಸದನದಲ್ಲಿ ಬಿಜೆಪಿ ಬಗ್ಗೆ ಲಘುವಾಗಿ ಮಾತನಾಡಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಹೇಳಿಕೆ ಖಂಡನೀಯ, ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಖಾತೆ ನೀಡಲಾಗಿದೆ. ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಅವಿಭಾಜ್ಯ ಅಂಗವಾಗಿರುವಾಗ, ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾತ್ರವಿದ್ದು, ಬಿಜೆಪಿ ಇಲ್ಲ ಎಂಬ ರೀತಿಯಲ್ಲಿ ರೇವಣ್ಣ ಹೇಳಿಕೆ ನೀಡಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಬಿಜೆಪಿಯ ಇಬ್ಬರು ಶಾಸಕರಿವುದನ್ನು ಮರೆತು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ಇದು ಮೈತ್ರಿ ಧರ್ಮಕ್ಕೆ ವಿರುದ್ಧವಾದ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮೈತ್ರಿ ಧರ್ಮಕ್ಕೆ ವಿರುದ್ಧವಾಗಿ ಮಾತನಾಡಿರುವ ರೇವಣ್ಣ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ ರೇವಣ್ಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಇಲ್ಲದಿದ್ದಲ್ಲಿ ಜೆಡಿಎಸ್ ಪಕ್ಷ ನೈತಿಕ ಹೊಣೆ ಹೊತ್ತು ಎನ್‌ಡಿಎ ಮೈತ್ರಿಕೂಟದಿಂದ ಹೊರಬರಬೇಕು. ಇಲ್ಲವಾದರೆ ಬಿಜೆಪಿ ಪಕ್ಷದಿಂದ ರೇವಣ್ಣ ಹೇಳಿಕೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

BJP leader and lawyer Devaraj Gowda demanded that former minister H.D. Revanna’s statement, which spoke lightly about the BJP in the House despite the BJP-JDS alliance, is condemnable and he should publicly apologize.