ಚನ್ನರಾಯಪಟ್ಟಣ: ಅರ್ಚಕರ ಸೇವೆ ಭಕ್ತ–ದೇವರ ನಡುವಿನ ಸಂಪರ್ಕ ಸೇತುವೆ: ಶ್ರೀ ಮಹೇಶ್ವರ ಶಿವಾಚಾರ್ಯ

Sri Maheshwar Shivacharya of Nuggehalli Puravarga Hiremath said that the service of priests is commendable in playing an important role as a bridge between devotees and God.

ಚನ್ನರಾಯಪಟ್ಟಣ: ಭಕ್ತ ಹಾಗೂ ದೇವರ ಮಧ್ಯೆ ಸಂಪರ್ಕ ಸೇತುವೆಯಾಗಿ ಪ್ರಮುಖ ಪಾತ್ರ ವಹಿಸುವಲ್ಲಿ ಅರ್ಚಕರ ಸೇವೆ ಶ್ಲಾಘನೀಯ ಎಂದು ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಹೇಳಿದರು.

ಪಟ್ಟಣದ ಗಣಪತಿ ಪೆಂಡಾಲ್ ನಲ್ಲಿ ವೀರಶೈವ ಲಿಂಗಾಯತ ಪುರೋಹಿತರ ಸೇವಾ ಟ್ರಸ್ಟ್ (ರಿ.) ಉದ್ಘಾಟಿಸಿ ಮಾತನಾಡಿ, ಪುರದ ಹಿತ ಕಾಪಾಡುವ ವ್ಯಕ್ತಿಯೇ ಪುರೋಹಿತ ಎಂದು ಆಶೀರ್ವಚನ ನೀಡಿದರು.

ಕಾಗೆಯು ನವಿಲಾಗಲು ಸಾಧ್ಯವಿಲ್ಲ. ಹಾಗೆಯೇ ಜಂಗಮ ಮೂರ್ತಿ ವಂಶ ಹೊರತುಪಡಿಸಿ ಬೇರಾರು ಅರ್ಚಕರಾಗಲು ಸಾಧ್ಯವಿಲ್ಲ. ಆಗಮನ ವಿದ್ಯೆ ಕಲಿತವರಷ್ಟೇ ಅರ್ಚಕರಲ್ಲ. ಅದು ಸರ್ಕಾರ ಇಲ್ಲವೇ ಇಲಾಖೆಯ ಒಂದು ನಿಯಮವಷ್ಟೇ. ಆದರೆ ಪೂರ್ವ ಕಾಲದಿಂದಲೂ ವಂಶ ಪಾರಂಪರಿಕವಾಗಿ ದೇವರ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರತಿಯೊಬ್ಬರು ಅರ್ಚಕರೇ ಸರಿ ಎಂದರು.

ಜಂಗಮ ಮೂರ್ತಿ ವಂಶವು ಪಾರಂಪರಿಕವಾಗಿ ಅರ್ಚಕ ವೃತ್ತಿ ನಿರ್ವಹಿಸುತ್ತಿದ್ದು ಸಮಾಜದ ಏಳಿಗೆ ಹಾಗೂ ಪವಿತ್ರತೆಯ ಸಲುವಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದು ದೇವರ ಸೇವೆಯನ್ನೇ ದೈನಂದಿನ ಚಟುವಟಿಕೆಯಾಗಿ ಮಾಡಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೂರ್ವಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಪುರೋಹಿತ್ಯ ಹಾಗೂ ಅರ್ಚಕ ವೃತ್ತಿಗೆ ಐತಿಹಾಸಿಕ ಮತ್ತು ಮಹತ್ವದ ಸ್ಥಾನ ಮಾನವಿದೆ. ರಾಜ ಮಹಾರಾಜರು ದೇವರ ಪೂಜೆಯ ಜೊತೆಗೆ ಗುರುಗಳ ಮಾರ್ಗದರ್ಶನ ಪಡೆಯುತ್ತಿದ್ದರು ಎಂದು ತಿಳಿಸಿದರು.

ಮನಸ್ಸು ಶುದ್ಧತೆಯಿಂದ ಕೂಡಿದ್ದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದ್ದು ಸಾಧನೆಯ ಗುರಿಯು ಸುಲಭವಾಗಿದೆ. ಶಿಸ್ತು ಶ್ರದ್ಧೆ ಹಾಗೂ ಭಕ್ತಿ ಭಾವದೊಂದಿಗೆ ದೈವವನ್ನು ಆರಾಧಿಸಿದರೆ ಸಕಲವು ಪ್ರಾಪ್ತಿಯಾಗಲಿದೆ. ದೇವರ ಪಾದದಲ್ಲಿ ಮುಕ್ತಿಯು ಲಭಿಸಲಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಪುರೋಹಿತರ ಹಿತ ಕಾಪಾಡುವಲ್ಲಿ ಸರ್ಕಾರವು ಬದ್ಧವಾಗಿದ್ದು ಸದಾ ನಿಮ್ಮೊಂದಿಗೆ ಇರುತ್ತದೆ. ನಿಮ್ಮಗಳ ಕ್ಷೇಮ ಹಾಗೂ ಏಳಿಗೆಗೆ ಅಗತ್ಯ ಯೋಜನೆಗಳನ್ನು ಕಾರ್ಯರೂಪಗೊಳಿಸುವಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೇ ಪರಮೇಶ್ ಮಾತನಾಡಿ, ಅರ್ಚಕ ವೃತ್ತಿ ಎಂಬುದು ದೇವರ ಕೊಡುಗೆಯಾಗಿದ್ದು ಯುಗ ಯುಗಗಳಿಂದಲೂ ಬಂದಿರುವ ಸಾಂಸ್ಕೃತಿಕ ಬಳುವಳಿಯಾಗಿದೆ. ಅರ್ಚಕರ ನಡುವೆ ಯಾವುದೇ ವೈಮನಸ್ಸು ಹಾಗೂ ಬಿರುಕು ಮೂಡಬಾರದು. ಒಗ್ಗಟ್ಟಿನೊಂದಿಗೆ ಮುನ್ನಡೆದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಮುಜರಾಯಿ ದೇವಾಲಯ ಅರ್ಚಕರ ಸಂಘದ ತಾಲ್ಲೂಕು ಅಧ್ಯಕ್ಷ ವೇ. ಡಾ.ಶ್ರೀಧರ ಮೂರ್ತಿ ಮಾತನಾಡಿ, ಮುಜರಾಯಿ ಇಲಾಖೆ ಹಾಗೂ ಅರ್ಚಕರ ನಡುವೆ ಸಂಪರ್ಕ ಸೇತುವೆಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಅರ್ಚಕರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಸಿದ್ಧ ಇರುತ್ತೇನೆ ಎಂದು ಭರವಸೆ ನೀಡಿದರು.

ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ವೀರಶೈವ ಲಿಂಗಾಯತ ಪುರೋಹಿತ ಸೇವಾ ಟ್ರಸ್ಟ್ ನ ಪದಗ್ರಹಣ ನಡೆಯಿತು.

ತಾಲ್ಲೂಕು ಬಿಜೆಪಿ ಮುಖಂಡ ಚಿದಾನಂದ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗಂಗೆಗೌಡ(ರಾಜಣ್ಣ), ನೂತನ ಟ್ರಸ್ಟ್ ಗೌರವಾಧ್ಯಕ್ಷ ರೇಣುಕಾರಾಧ್ಯ, ಶಂಕರ್ ಪ್ರಸಾದ್, ಅಧ್ಯಕ್ಷ ಸಿದ್ದೇಶ್, ಉಪಾಧ್ಯಕ್ಷ ರುದ್ರೇಶ್, ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಸಾನಂದ್ ಶಾಸ್ತ್ರಿ, ಖಜಾಂಚಿ ಪುರ ರುದ್ರೇಶ್, ನಿರ್ದೇಶಕರಾದ ಕಿರಣ್, ಸಿದ್ದಲಿಂಗರಾಧ್ಯ, ಸಿದ್ದಲಿಂಗಸ್ವಾಮಿ, ವಿಶ್ವನಾಥ್, ನಾಗೇಶ್, ವೇದಮೂರ್ತಿ, ಕಾರ್ತಿಕ್ ಮತ್ತು ಬಸವರಾಜ್ ಹಾಗೂ ಇತರರು ಇದ್ದರು.

Sri Maheshwar Shivacharya of Nuggehalli Puravarga Hiremath said that the service of priests is commendable in playing an important role as a bridge between devotees and God.