ಹಾಸನ, ಜು. 1: ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಸ್ಕಾಲರ್ಸ್ ವರ್ಲ್ಡ್ ಶಾಲೆ ವಿದ್ಯಾರ್ಥಿಗಳು ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಗೆ ಹೂಗುಚ್ಛ ನೀಡಿ ಗೌರವ ಸಲ್ಲಿಸುವ ಮೂಲಕ ಅವರ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈದ್ಯರೊಂದಿಗೆ ಸಂವಾದ ನಡೆಸಿ, ವೈದ್ಯಕೀಯ ವೃತ್ತಿಯ ಮಹತ್ವ, ಸೇವಾ ಮನೋಭಾವ ಹಾಗೂ ಸಮಾಜಕ್ಕೆ ವೈದ್ಯರು ನೀಡುತ್ತಿರುವ ಅಮೂಲ್ಯ ಕೊಡುಗೆಗಳ ಕುರಿತು ಮಾಹಿತಿ ಪಡೆದರು. “ವೈದ್ಯರು ನಮ್ಮ ಸಮಾಜದ ಪ್ರತ್ಯಕ್ಷ ದೈವಗಳು” ಎಂಬ ಸಂದೇಶವನ್ನು ಮಕ್ಕಳು ಹೃದಯಂಗಮ ಮಾಡಿಕೊಂಡರು.
ವಿದ್ಯಾರ್ಥಿಗಳ ಶಿಸ್ತು, ಕೃತಜ್ಞತೆ ಹಾಗೂ ವೈದ್ಯರ ಬಗ್ಗೆ ಹೊಂದಿರುವ ಗೌರವವನ್ನು ಮೆಚ್ಚಿದ ದಂತ ವೈದ್ಯರಾದ ಡಾ. ಶೃತಿ ಹಾಗೂ ಡಾ. ಸೀಮಾ ಅವಿನಾಶ್, “ಮಕ್ಕಳ ಈ ಭೇಟಿ ನಮಗೆ ವಿಭಿನ್ನ ಅನುಭವ ನೀಡಿದೆ. ವೈದ್ಯರ ಸೇವೆಯ ಬಗ್ಗೆ ಮಕ್ಕಳಲ್ಲಿ ಇಂತಹ ಅಭಿಮಾನ ಮತ್ತು ಅರಿವು ಮೂಡುತ್ತಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ” ಎಂದು ಅಭಿಪ್ರಾಯಪಟ್ಟರು.
ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್ ಮಾತನಾಡಿ, ಸಮಾಜದ ಸೇವೆಯಲ್ಲಿ ತೊಡಗಿರುವ ವೈದ್ಯರಿಗೆ ಗೌರವ ಸಲ್ಲಿಸುವ ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸುವುದು ಅತ್ಯಂತ ಮುಖ್ಯವಾಗಿದೆ. ಮಕ್ಕಳಲ್ಲಿ ದಯೆ, ಶ್ರದ್ಧೆ ಹಾಗೂ ಸೇವಾ ಮನೋಭಾವ ಬೆಳೆಸುವುದರೊಂದಿಗೆ, ವೈದ್ಯರಂತೆ ಸಮಾಜಕ್ಕೆ ಕೊಡುಗೆ ನೀಡುವ ಸಂಕಲ್ಪವೂ ಮೂಡಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವೈದ್ಯ ವೃತ್ತಿಯ ಬಗ್ಗೆ ಗೌರವ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಯಶಸ್ವಿಯಾಗಿ ಸಾಕಾರಗೊಳಿಸಲಾಯಿತು.












