ಸಕಲೇಶಪುರ: ಕಳ್ಳತನವಾದ ಒಂದೇ ಗಂಟೆಯೊಳಗೆ ಆರೋಪಿಗಳ ಬಂಧನ- ಪೊಲೀಸರ ತ್ವರಿತ ಕಾರ್ಯಾಚರಣೆ

ಸಕಲೇಶಪುರ, ಜನವರಿ 23, 2026:ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಸತ್ತಿಗಾಲ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕೇವಲ ಒಂದು ಗಂಟೆಯೊಳಗೆ ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಕಲೇಶಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಜನವರಿ 23ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಚಿಕ್ಕಸತ್ತಿಗಾಲ ಗ್ರಾಮದ ಶಿವಕುಮಾರ್ ಅವರ ನಿವಾಸದಲ್ಲಿ, ಅವರ ತಾಯಿ ಭೈರಮ್ಮ ಒಬ್ಬರೇ ಇದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು, ಕೆಲಸದ ನೆಪದಲ್ಲಿ ದಿಕ್ಕುತಪ್ಪಿಸಿದ ಆರೋಪಿಗಳು ಸುಮಾರು 70 ಸಾವಿರ ರೂ. ಮೌಲ್ಯದ ಬೆಳ್ಳಿ ವಸ್ತುಗಳು, ಎರಡು ಆಂಡ್ರಾಯ್ಡ್ ಮೊಬೈಲ್‌ಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ದೊರಕಿದ ಕೂಡಲೇ ಸಕಲೇಶಪುರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಠಾಣೆಯ ಇನ್‌ಸ್ಪೆಕ್ಟರ್ ವಿ.ಸಿ. ವನರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಂಜೆ 3.30ರ ಸುಮಾರಿಗೆ ಸಕಲೇಶಪುರದ ರೆಲಿಶ್ ಬಾರ್ ಮುಂಭಾಗದಿಂದ ಅಸ್ಸಾಂ ಮೂಲದ ರಜುಲ್ ಹುಸೇನ್, ಶುಕುರ್ ಆಲಿ ಹಾಗೂ ಆಬಿದ್ ಆಲಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದರು.

ಬಂಧಿತ ಆರೋಪಿಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪತ್ತೆ ಕಾರ್ಯಾಚರಣೆಯಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪೃಥ್ವಿ, ಕೀರ್ತಿ, ಹೆಡ್‌ಕಾನ್ಸ್ಟೇಬಲ್ ರೇವಣ್ಣ, ಶ್ರೀಧರ್, ಪೊಲೀಸ್ ಕಾನ್ಸ್ಟೇಬಲ್ ರೇವಣ್ಣ ಸೇರಿದಂತೆ ಇತರರು ಪ್ರಮುಖ ಪಾತ್ರವಹಿಸಿದ್ದರು.