ಹಾಸನ: “ಯಾರು ಯಾರ ಬೆನ್ನಿಗೆ ಚೂರಿ ಹಾಕಿದರು? ಯಾರು ಯಾರಿಗೆ ಟೋಪಿ ಹಾಕಿದರು ಎನ್ನುವುದು ಸಮಾವೇಶದಲ್ಲಿ ಬಹಿರಂಗ ” –ಮಾಜಿ ಸಚಿವ ಹೆಚ್ ಡಿ ರೇವಣ್ಣ

The development of Hassan district has completely come to a standstill, and people are living in tears. A public meeting has been organized in Hassan on Saturday to give a courageous message that we are with the people in such difficult times.

ಹಾಸನ: ಜಿಲ್ಲೆಯ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಜನರು ಕಣ್ಣೀರಿನಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಜನರ ಜೊತೆಗೆ ನಾವಿದ್ದೇವೆ ಎಂಬ ಧೈರ್ಯದ ಸಂದೇಶ ನೀಡಲು ನಾಳೆ ಹಾಸನದಲ್ಲಿ ಜನತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ದಳ (ಸೆಕ್ಯುಲರ್) ಪಕ್ಷಕ್ಕೆ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಲಾಗುತ್ತಿದೆ. 1962ರಿಂದ ರಾಜಕೀಯ ಜೀವನ ಆರಂಭಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು 63 ವರ್ಷಗಳಿಂದ ಜಿಲ್ಲೆ ಹಾಗೂ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. 94 ವರ್ಷದ ಇಳಿ ವಯಸ್ಸಿನಲ್ಲೂ ದೇವೇಗೌಡರು ಜನರೊಂದಿಗಿದ್ದಾರೆ ಎಂಬ ಸಂದೇಶ ಸಾರುವುದೇ ಈ ಸಮಾವೇಶದ ಉದ್ದೇಶ ಎಂದರು.

ಜನತಾ ಸಮಾವೇಶದ ಕಾರ್ಯಕ್ರಮ ಬೆಳಿಗ್ಗೆ 8.30ಕ್ಕೆ ವೇದಿಕೆ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮೊದಲು ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಬೆಳಿಗ್ಗೆ 11 ಗಂಟೆಗೆ ಹಾಸನಕ್ಕೆ ಆಗಮಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಸಕಾಲಕ್ಕೆ ಬಿಲ್ ಪಾವತಿಯಾಗದೆ ಗುತ್ತಿಗೆದಾರರು ಆತ್ಮಹತ್ಯೆಗೆ ಯತ್ನಿಸುವ ಮಟ್ಟಿಗೆ ಪರಿಸ್ಥಿತಿ ತಲುಪಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ತೀವ್ರವಾಗಿ ಬೇಸತ್ತಿದ್ದಾರೆ. ಜಿಲ್ಲೆಯ ಜನರೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಲು ಈ ಜನತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಯಾರು ಯಾರ ಬೆನ್ನಿಗೆ ಚೂರಿ ಹಾಕಿದರು, ಯಾರು ಯಾರಿಗೆ ಟೋಪಿ ಹಾಕಿದರು ಎಂಬ ಎಲ್ಲ ಸತ್ಯಾಂಶಗಳನ್ನು ದಾಖಲೆ ಸಮೇತ ಜ.24ರ ಶನಿವಾರ ನಡೆಯುವ ಸಮಾವೇಶದಲ್ಲಿ ಜನರ ಮುಂದಿಡಲಾಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ರೇವಣ್ಣ ತೀವ್ರ ವಾಗ್ದಾಳಿ ನಡೆಸಿದರು.

ಕಳೆದ ಎರಡೂವರೆ ವರ್ಷಗಳಿಂದ ಹಾಸನ ಜಿಲ್ಲೆಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದ್ದು, ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಕ್ಷೇತ್ರಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಕೊಡುಗೆ ಇಲ್ಲ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಈ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ರೈತರ 520 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿತ್ತು. ಈಗಿನ ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸಿದರು.
ಹಾಸನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ಹೆಚ್ಚುವರಿ ಅನುದಾನ ನೀಡಿಲ್ಲ. ನೀರಾವರಿ ಯೋಜನೆಗಳಿಗೆ ಅಡ್ಡಿ ಉಂಟುಮಾಡಲಾಗಿದೆ. ತೋಟಗಾರಿಕೆ ಕಾಲೇಜು ಸ್ಥಾಪನೆ ಮಾಡುವ ಮಹದಾಸೆಯನ್ನೂ ಹಿಂದಿನ ಸರ್ಕಾರವೇ ತಣ್ಣೀರೆರಚಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಲೋಕಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳು ಹೇಗೆ ನಡೆದವು ಎಂಬುದನ್ನು ಜನರು ನೋಡಿದ್ದಾರೆ. ಈ ಎಲ್ಲಾ ಆಟಾಟೋಪಗಳಿಗೆ ಶನಿವಾರದ ಸಮಾವೇಶದಲ್ಲಿ ಸೂಕ್ತ ಉತ್ತರ ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂಬಿಕೆ ದ್ರೋಹಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಎಂದು ಟೀಕಿಸಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿ ಪಕ್ಷ ಸಂಘಟಿಸಿದ್ದ ಚಂದ್ರಶೇಖರ್ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದರು. ಚರಣ್ ಸಿಂಗ್ ಬಡ ರೈತನ ಮಗ ಎಂಬ ಕಾರಣಕ್ಕೆ ಅವರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಬಿಡಲಿಲ್ಲ. ಹತ್ತೂವರೆ ತಿಂಗಳಲ್ಲಿ ದೇವೇಗೌಡರಿಂದ ಅಧಿಕಾರ ಕಿತ್ತುಕೊಂಡವರು ಯಾರು ಎಂಬುದನ್ನು ಜನರು ಮರೆಯಬಾರದು ಎಂದು ಹೇಳಿದರು.

ಇಂತಹ ದ್ರೋಹ ರಾಜಕಾರಣವೇ ಕಾಂಗ್ರೆಸ್ ದೇಶಾದ್ಯಂತ ನೆಲಕಚ್ಚಲು ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಹಾಸನ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಗಿರೀಶ್ ಚನ್ನವೀರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

The development of Hassan district has completely come to a standstill, and people are living in tears. A public meeting has been organized in Hassan on Saturday to give a courageous message that we are with the people in such difficult times.