Sakaleshpur: ರೌಡಿಶೀಟ್ ತೆರೆಯುವುದಾಗಿ ಮುಖಂಡರಿಗೆ ಎಚ್ಚರಿಕೆ-ಡಿವೈಎಸ್ಪಿ ವಿರುದ್ಧ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರ ದಿಢೀರ್ ಪ್ರತಿಭಟನೆ

Sakaleshpur|ಸಕಲೇಶಪುರ, ಜೂನ್1: 
ಸಕಲೇಶಪುರ ಪಟ್ಟಣದಲ್ಲಿ ಡಿವೈಎಸ್ಪಿ ಮಾಲತೀಶ್ ವಿರುದ್ಧ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಕಾರ್ಯಕರ್ತರು ಪೊಲೀಸ್ ಠಾಣೆ ಮುಂಭಾಗ ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಬಜರಂಗದಳ ಮತ್ತು ವಿಹೆಚ್‌ಪಿ ಕಾರ್ಯಕರ್ತರಿಗೆ ಅವಮಾನ, ನಿಂದನೆ ಹಾಗೂ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಡಿವೈಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನಾಕಾರರ ಆರೋಪದ ಪ್ರಕಾರ, ಹಾಸನ ಜಿಲ್ಲಾ ಬಜರಂಗದಳದ ಜಿಲ್ಲಾ ಸಹ ಸಂಯೋಜಕ ವಿಷ್ಣು ಹಾಗೂ ತಾಲೂಕು ಸಂಯೋಜಕ ಶೃಜನ್ ಅವರಿಗೆ ಡಿವೈಎಸ್ಪಿ ಮಾಲತೀಶ್ ಬೆದರಿಕೆ ಹಾಕಿದ್ದು, “ರೌಡಿ ಶೀಟರ್ ತೆರೆಯುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ವಿಚಾರವಾಗಿ ನ್ಯಾಯ ಕೇಳಲು ಸೋಮವಾರ ಮಧ್ಯಾಹ್ನ ಡಿವೈಎಸ್ಪಿ ಕಚೇರಿಗೆ ತೆರಳಿದ್ದ ಕಾರ್ಯಕರ್ತರಿಗೆ ಉಡಾಫೆಯ ಉತ್ತರ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಡಿವೈಎಸ್ಪಿಯ ವರ್ತನೆಯಿಂದ ಅಸಮಾಧಾನಗೊಂಡ ಕಾರ್ಯಕರ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

“ಎಸ್‌ಪಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ” ಎಂದು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಘೋಷಣೆ ಕೂಗಿ ಠಾಣೆ ಎದುರು ಕುಳಿತು ಪ್ರತಿಭಟನೆ ಮುಂದುವರಿಸಿದರು.

ಕುಶಾಲನಗರ ಚಲೋ ಹಿನ್ನೆಲೆ:
ಎರಡು ದಿನಗಳ ಹಿಂದೆ ಪಟ್ಟಣದ ಕುಶಾಲನಗರ ಪ್ರದೇಶದಲ್ಲಿ ಗೋವಿನ ತಲೆಯನ್ನು ರಸ್ತೆಯ ಮಧ್ಯೆ ಇಟ್ಟಿದ್ದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ “ಕುಶಾಲನಗರ ಚಲೋ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ಬಜರಂಗದಳ ಮುಖಂಡ ವಿಷ್ಣು ಅವರನ್ನು ಡಿವೈಎಸ್ಪಿ ಠಾಣೆಗೆ ಕರೆಸಿಕೊಂಡಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ವಿಷ್ಣು ಮತ್ತು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.