20.1 C
Munich
Home News ಹಾಸನ: ಸಾಣೇಹಳ್ಳಿ ಶ್ರೀಗಳ ಹೇಳಿಕೆಗೆ ಖಂಡನೆ

ಹಾಸನ: ಸಾಣೇಹಳ್ಳಿ ಶ್ರೀಗಳ ಹೇಳಿಕೆಗೆ ಖಂಡನೆ

ಹಾಸನ: ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆ ಎಂಬ ಹೇಳಿಕೆ ನೀಡಿರುವ ಸಾಣೇಹಳ್ಳಿ ಶ್ರೀಗಳ ಮಾತು ಖಂಡನೀಯ ಎಂದು ಆಲೂರು ಕಾರ್ಜುವಳ್ಳಿ ಮಠದ ಮಠಾಧೀಶರಾದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಧರ್ಮದಲ್ಲಿ ಜಂಗಮ ಸ್ವಾಮಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಿದ್ಧಾಂತ ಶಿಖಾಮಣಿಯ ತತ್ವಗಳೊಂದಿಗೆ ರೇಣುಕ ಲೀಲೆ, ಬಸವಾದಿ ಶಿವಶರಣರ ಪ್ರಸಾರ, ವಚನಗಳು, ಶರಣ ಲೀಲಾಮೃತ, ಪುರಾಣ ಪ್ರವಚನಗಳ ಮೂಲಕ ಭಕ್ತ ಸಮುದಾಯದಲ್ಲಿ ಸಂಸ್ಕಾರಯುಕ್ತ ಸದೃಢ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.

ಭಕ್ತ-ಜಂಗಮರ ಸಂಬಂಧ ಅವಿನಾಭಾವವಾಗಿದೆ. ಜನರು ಜಂಗಮರನ್ನು ಸಾಕ್ಷಾತ್ ಪರಶಿವನೇ ಮನೆಗೆ ಬಂದ ಎಂಬ ಭಾವದಿಂದ ಪಾದ ಪೂಜಿಸಿ, ಫಲ-ತಾಂಬೂಲ-ದಕ್ಷಿಣೆ, ಧಾನ್ಯ ಗಳನ್ನು ಸಮರ್ಪಿಸುವ ಪರಂಪರೆ ಇಂದಿಗೂ ಮುಂದುವರಿದಿದೆ ಎಂದರು.

ಜಗಜ್ಯೋತಿ ಬಸವಣ್ಣನವರು ಜಂಗಮರ ಆಧಿಕ್ಯವನ್ನು ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ, ಜಂಗಮ ಬಂದರೆ ನಡೆ ನಡೆ ಎಂದು ಹೇಳಿದರು. ವೀರಶೈವ-ಲಿಂಗಾಯತ ಧರ್ಮದ ಅಷ್ಟಾವರಣಗಳಲ್ಲಿ ಗುರು-ಲಿಂಗ-ಜಂಗಮ-ವಿಭೂತಿ-ಪಾದೋದಕ-ಪ್ರಸಾದಗಳು ಪವಿತ್ರವಾದ ಸಂಸ್ಕಾರ ಗಳಾಗಿವೆ. ಇಂತಹ ಪಾವನ ವ್ಯವಸ್ಥೆಯನ್ನು ತಾತ್ಸಾರವಾಗಿ ಮಾತನಾಡುವುದು ಧರ್ಮಜ್ಞಾನಕ್ಕೇ ಅವಮಾನ ಎಂದು ವಿಷಾದ ವ್ಯಕ್ತಪಡಿಸಿದರು.

ಜಂಗಮ ಸ್ವಾಮಿಗಳು ಜಾತಿ-ಕುಲ-ಲಿಂಗ ಭೇದವಿಲ್ಲದೆ ಶಿಶುವಿನಿಂದ ಅಂತ್ಯಕ್ರಿಯೆಯವರೆಗೂ ಎಲ್ಲಾ ಧಾರ್ಮಿಕ ಸಂಸ್ಕಾರಗಳನ್ನು ನೆರವೇರಿಸುತ್ತಾ ಬಂದಿದ್ದಾರೆ.

ಅವರ ಪಾದ ಶವದ ಮೇಲೆ ಇಟ್ಟು ಆಶೀರ್ವಾದ ನೀಡುವುದರಿಂದ ಆ ಶವ ಶಿವನಾಗುತ್ತದೆ ಎಂಬ ಭಕ್ತಿ ಪರಂಪರೆಯ ನಂಬಿಕೆ ಇದೆ. ಇಂತಹ ಮಹತ್ವದ ಸೇವೆ ನಿರ್ವಹಿಸುತ್ತಿರುವ ಜಂಗಮ ಸ್ವಾಮಿಗಳನ್ನು ವಿವೇಕವಿಲ್ಲದವರಂತೆ ಚಿತ್ರಿಸುವುದು ಅವರ ಮಾನಸಿಕ ಶೋಷಣೆ ಮಾಡುತ್ತಿರುವಂತಾಗಿದೆ ಎಂದರು.

ಜಂಗಮ ಸ್ವಾಮಿಗಳು ಕೇವಲ ಒಂದು ಜಾತಿ, ವರ್ಗಕ್ಕೆ ಸೇರಿದವರಲ್ಲ. ಅವರು ಸಮಸ್ತ ಸಮಾಜದ ಹಿತವನ್ನು ಬಯಸುವವರು. ಆದರೂ ಅವರನ್ನು ಜಾತಿ ಆಧಾರದಲ್ಲಿ ಕೀಳಾಗಿ ಹೇಳಿರುವ ಸಾಣೇಹಳ್ಳಿ ಶ್ರೀಗಳ ಮನಸ್ಥಿತಿ ವಿಕೃತವಾಗಿದ್ದು, ಇಂತಹ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ವೀರಶೈವ-ಲಿಂಗಾಯತ ಸದ್ಭಕ್ತ ವೃಂದ ಹಾಗೂ ಜಿಲ್ಲಾ ಜಂಗಮ ಸಮಾಜ ಹಾಸನ ಪರವಾಗಿ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮಶೇಖರಯ್ಯ, ಧರಣಿಕುಮಾರ್, ರೇಣುಕಾರಾಧ್ಯ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!