ಚನ್ನರಾಯಪಟ್ಟಣ: ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಗುರುತಿಸುವ ವೇದಿಕೆ

S. Srinivas, Education Coordinator of Hirisave Hobli, said that the Talent Fountain is a platform to identify the talent in children and bring it to the forefront.

ಚನ್ನರಾಯಪಟ್ಟಣ: ಪ್ರತಿಭಾ ಕಾರಂಜಿಯು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಮುಖ್ಯ ಭೂಮಿಕೆಗೆ ತರುವ ವೇದಿಕೆಯಾಗಿದೆ ಎಂದು ಹಿರೀಸಾವೆ ಹೋಬಳಿಯ ಶಿಕ್ಷಣ ಸಂಯೋಜಕ ಎಸ್.ಶ್ರೀನಿವಾಸ್ ಹೇಳಿದರು.

ತಾಲ್ಲೂಕಿನ ಜಿನ್ನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಲೆ ಎಂಬುದು ಯಾರ ಸ್ವತ್ತು ಅಲ್ಲ ಎಂದರು.

ತಮ್ಮಲ್ಲಿರುವ ಕಲೆ ಹಾಗೂ ಪ್ರತಿಭೆಯನ್ನು ಹೊರ ಜಗತ್ತಿಗೆ ಪ್ರದರ್ಶಿಸದೆ ತಮ್ಮೊಳಗೆ ಇಟ್ಟುಕೊಂಡರೆ ಅದು ಅಲ್ಲಿಯೇ ನಶಿಸಿ ಹೋಗುತ್ತದೆ. ಅದನ್ನು ಸುಲಭವಾಗಿ ಕ್ಷೀಣಿಸಲು ಅಥವಾ ನಶಿಸಲು ಬಿಡಬಾರದು. ಸಮಯ ಸಿಕ್ಕಾಗ ಸದುಪಯೋಗ ಪಡಿಸಿಕೊಂಡು ಯಶಸ್ಸು ಗಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಟಿವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯಿಂದ ದೂರ ಸರಿದು, ತಮಗೆ ಯಾವ ಕ್ಷೇತ್ರದ ಮೇಲೆ ಆಸಕ್ತಿ ಇದೆಯೋ ಅತ್ತ ಮುಖ ಮಾಡಿ ಸಹನೆ, ಶ್ರದ್ದೆ ಹಾಗೂ ಭಕ್ತಿಯೊಂದಿಗೆ ನಡೆದರೆ ಸಾಧನೆಯ ಗುರಿಯನ್ನು ಸುಲಭವಾಗಿ ತಲುಪಬಹುದು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಬೊಮ್ಮೇಗೌಡ ಮಾತನಾಡಿ, ಗ್ರಾಮೀಣ ಭಾಗದ ಅದೆಷ್ಟೋ ಮಂದಿ ಪ್ರತಿಭಾನ್ವಿತರು ಸಾಹಿತ್ಯ, ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ತಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಿ ಹೆಸರು ಮಾಡಿರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಲಸ್ಟರ್ ವ್ಯಾಪ್ತಿಯ 5 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 8 ಕಿರಿಯ ಪ್ರಾಥಮಿಕ ಶಾಲೆಗಳಿಂದ ಒಟ್ಟು 88 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಕಂಠಪಾಠ, ಛದ್ಮವೇಷ, ಕ್ಲೈ ಮಾಡಲಿಂಗ್, ದೇಶ ಭಕ್ತಿ ಗೀತೆ, ಅಭಿನಯ ಗೀತೆ, ಆಶುಭಾಷಣ ಹಾಗೂ ಏಕಪಾತ್ರ ಅಭಿನಯ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಎಸ್ ಡಿ ಎಂ ಸಿ ಸದಸ್ಯ ವಿಜಯ್ ಕುಮಾರ್, ಶ್ರವಣಬೆಳಗೊಳ ಹೋಬಳಿ ಇಸಿಓ ಯಾದವರಾಜ್, ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಸಾಗರ್, ಮುಖ್ಯ ಶಿಕ್ಷಕರ ಪಿ.ಎನ್.ಉಮೇಶ್, ನಿವೃತ್ತ ಶಿಕ್ಷಕ ಉಮೇಶ್, ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪಾಲಕರು ಪಾಲ್ಗೊಂಡಿದ್ದರು.