ಹಾಸನ: ರಾಷ್ಟ್ರಕವಿ ಕುವೆಂಪು ಕನ್ನಡದಲ್ಲಿ ಹುಟ್ಟಿದ್ದೇ ನಮ್ಮ ಹೆಮ್ಮೆ-ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ

On the occasion of the 121st birth anniversary of national poet Kuvempu, a wreath was laid at the statue of Kuvempu in the premises of the District Kannada Sahitya Parishad in the city and tributes were paid.

ಹಾಸನ: ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮ ಜಯಂತಿ ಹಿನ್ನಲೆಯಲ್ಲಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಜೊತೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಕುವೆಂಪು ಅವರ ಸಾಹಿತ್ಯ ಸರ್ವರ ಏಳಿಗೆಗೂ ಅವಶ್ಯ. ಅವರ ಸಾಹಿತ್ಯವನ್ನು ಓದಿದವರು ಈ ಸಮಾಜದಲ್ಲಿ ಉತ್ತಮರಾಗಿ ಬಾಳಬಲ್ಲರು ಎಂದರು.

ನಾವು ವಿದ್ಯಾಭ್ಯಾಸದ ಅವಧಿಯಿಂದಲೂ ಅವರ ಕೃತಿಗಳನ್ನು ಓದುತ್ತಾ ಬಂದಿದ್ದೇನೆ. ನಾವು ಕಲಿಯುತ್ತೇವೆ, ಸಂತೋಷ ಪಡುತ್ತೇವೆ, ನಮ್ಮ ಬದುಕಿಗೆ ಅವರ ಬರಹ ಹೊಸ ಚೈತನ್ಯ ತುಂಬಿದೆ ಎಂದರು.

ಕುವೆಂಪು ಎಂದಾಕ್ಷಣ ಬಾರಿಸು ಕನ್ನಡ ಡಿಂಡಿಮವ ಎಂಬ ಕವಿತೆ ನೆನಪಾಗುತ್ತದೆ ಎಂದು ವಾಚನ ಮಾಡಿದರು. ಮುಂದುವರಿದು ಓ ನನ್ನ ಚೇತನಾ ಕವಿತೆ ಶತಮಾನ ಕಳೆದರೂ ಅಚ್ಚಳಿಯದೇ ಉಳಿದಿದೆ. ಕನ್ನಡದ ಕವಿಯಲ್ಲ, ರಾಷ್ಟ್ರಕವಿ ಕನ್ನಡಕ್ಕೆ ನೊಬೆಲ್ ಪಾರಿತೋಷಕ ಕೊಡುವುದಿದ್ದರೆ ಅದು ಕುವೆಂಪು ಅವರಿಗೇ ಸಲ್ಲುತ್ತಿತ್ತು ಎಂದರು.

ಅವರೊಬ್ಬ ಮಹಾನುಭಾವ, ಅವರ ಪ್ರೌಢಿಮೆಗೆ ಅವರು ಇಂಗ್ಲಿಷ್‌ನಲ್ಲೂ ಬರೆದು ವಿಶ್ವಮಾನ್ಯರಾಗಬಹುದಾಗಿತ್ತು. ಆದರೆ ಕನ್ನಡದ ಬಗೆಗೆ ಅವರಲ್ಲಿದ್ದ ಆಸ್ತೆ, ತಪಸ್ಸಿನಿಂದಾಗಿ ನಮಗಾಗಿ ಕನ್ನಡದಲ್ಲಿಯೇ ಉಳಿದರು ಎಂದರು.

ಅಂತಹ ಆಗಾಧ ಚೇತನ ನಮ್ಮ ನಡುವೆ ಇತ್ತು ಎಂಬುದೇ ನಮಗೆ ಹೆಮ್ಮೆಯ ವಿಷಯ ಎಂದು ನುಡಿದರು. ನಾನು ಕುವೆಂಪು ಅವರ ಅಭಿಮಾನಿ, ಅವರ ದೊಡ್ಡ ದೊಡ್ಡ ಪುಸ್ತಕಗಳನ್ನು ಕೊಂಡು ಓದಿದ್ದನ್ನು ನೆನಪಿಸಿಕೊಂಡ ಅವರು, ಕುವೆಂಪು ನಮ್ಮ ನಾಡಿನಲ್ಲಿ ಹುಟ್ಟಿದ್ದೇ ಒಂದು ಹೆಮ್ಮೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ಇಡೀ ವಿಶ್ವದ ಮೇರು ಕವಿಗಳಲ್ಲಿ ಕುವೆಂಪು ಅಗ್ರ ಪಂಥಿಯಲ್ಲಿ ನಿಲ್ಲುತ್ತಾರೆ. ಜ್ಞಾನಪೀಠ ಲಭಿಸಿದ ರಾಮಾಯಣ ದರ್ಶನಂ ಕೃತಿ ರಚಿಸಿದ ಕುವೆಂಪು ಅವರು, ಶಿಶು ಸಾಹಿತ್ಯವನ್ನೂ ಕೂಡ ರಚಿಸುತ್ತಾರೆ ಎಂದರೆ ಅವರ ಪ್ರಬುದ್ಧತೆಯನ್ನು ನಾವು ಅರ್ಥೈಸಿಕೊಳ್ಳಲೇಬೇಕು ಎಂದರು.

ಕುವೆಂಪು ಬರೀ ಸಾಹಿತಿಯಲ್ಲ, ಮಹಾನ್ ಜ್ಞಾನಿ. ಅವರಿಂದ ರಚಿತವಾದ ಸಾಹಿತ್ಯ ವಿಶ್ವ ಮಾನ್ಯವಾದುದು, ಅವರ ಬರಹಗಳು ಜಗತ್ತಿನ ಎಲ್ಲಾ ಭಾಷೆಗಳಿಗೂ ತರ್ಜುಮೆಗೊಂಡು ಸರ್ವರು ಓದಬೇಕಾದ ಅಗತ್ಯತೆ ಇದೆ ಎಂದರು.

ನಾಡ ಗೀತೆಯಲ್ಲಿ ಕುವೆಂಪು ಅವರು ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು, ಪರ್ವತ, ನದಿ, ಕಾಡು, ಹೊಲಗಳ ವೈಭವವನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾರೆ. ಜೊತೆಗೆ, ನಾಡಿನ ಜನರ ಶ್ರಮ, ಸಹನಶೀಲತೆ, ಮಾನವೀಯ ಮೌಲ್ಯಗಳು ಹಾಗೂ ಸ್ವಾಭಿಮಾನವನ್ನು ಉನ್ನತ ಮಟ್ಟದಲ್ಲಿ ಪ್ರಶಂಸಿಸಿದ್ದಾರೆ.
20ನೇ ವಯಸ್ಸಿನಲ್ಲೇ ಯುವಕ ಕುವೆಂಪು ರಚಿಸಿದ ನಾಡಗೀತೆಗೆ ಒಂದು ಶಬ್ದ ತೆಗೆಯಲು, ಸೇರಿಸಲು ಆಗದ ಸಮ ತೂಕದ ಗೀತೆ ರಚಿಸಲು ಕುವೆಂಪು ಅವರಿಂದ ಮಾತ್ರ ಸಾಧ್ಯ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ ಎಲ್ಲರನ್ನು ಸ್ವಾತಿಸಿದರು. ಈ ವೇಳೆ ಕಸಾಪ ರಾಜ್ಯ ಸಮಿತಿ ಸದಸ್ಯ ಹೆತ್ತೂರು ನಾಗರಾಜು, ಸಂಘಟನಾ ಕಾರ್ಯದರ್ಶಿ ಆರ್.ಬಿ ಶಂಕರ್, ಸಹ ಕಾರ್ಯದರ್ಶಿ ನಾಗೇಶ್, ಪದಾಧಿಕಾರಿಗಳಾದ ಕಮಲಮ್ಮ, ಪ್ರಕಾಶ್ ಮೇಗಳಕೇರಿ, ಆಲೂರು ತಾಲೂಕು ಕಸಾಪ ಅಧ್ಯಕ್ಷ ಆದಿಲ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ, ಪೃಥ್ವಿ, ಕುವೆಂಪು ಯುವಕರ ಬಳಗದ ಅಧ್ಯಕ್ಷ ಗಿರೀಶ್ ಮೊದಲಾದವರಿದ್ದರು.

On the occasion of the 121st birth anniversary of national poet Kuvempu, a wreath was laid at the statue of Kuvempu in the premises of the District Kannada Sahitya Parishad in the city and tributes were paid.