ಆಲೂರು: ಏತ ನೀರಾವರಿ ಯೋಜನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಸಮಿತಿ ರಚನೆ ಮಾಡಿದ್ದು ಶೀಘ್ರದಲ್ಲಿ ಸ್ಥಗಿತ ಗೊಂಡಿರುವ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನೆಡೆದ ತಾಲ್ಲೂಕು ಮಟ್ಟದ ತ್ರೈ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ನೀರಿಗೆ ಬರವಿಲ್ಲ, ತಾಂತ್ರಿಕ ಸಮಸ್ಯೆ ತೊಂದರೆ ಹಾಗೂ ನಿರ್ವಹಣೆ ಇಲ್ಲದೆ ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದೆ.
ಸರ್ಕಾರ ರಚಿಸಿರುವ ನೂತನ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದು ಪ್ರತಿ ಸಭೆಯಲ್ಲಿ ಕ್ಷೇತ್ರದ ನೀರಾವರಿ ಸಮಸ್ಯೆ ಕುರಿತು ನಿರಂತರವಾಗಿ ಬೆಳಕು ಚೆಲ್ಲುತ್ತಿದ್ದೇ ಎಂದರು.ತಾಲೂಕಿನಲ್ಲಿರುವ ಏತ ನೀರಾವರಿ ಯೋಜನೆಗಳು ಚಾಲನೆಗೊಳ್ಳಲು ಸಮಸ್ಯೆಗಳು ಏನು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಶಾಸಕರಿಗೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ರಾಮೇನಹಳ್ಳಿ, ಹೊಸಪುರ ಏತ ನೀರಾವರಿ ಘಟಕದಲ್ಲಿ ಶೇ.90 ರಷ್ಟು ಕಾಮಗಾರಿ ಮುಗಿದಿದ್ದು. ವಿದ್ಯುತ್ ಸಂಪರ್ಕ ನೀಡಿದರೆ ಚಾಲನೆ ನೀಡಬಹುದು ಎಂದು ಉತ್ತರಿಸಿದರು.
ಇನ್ನೂ 15 ದಿನದ ಒಳಗಾಗಿ ಏತ ನೀರಾವರಿ ಯೋಜನೆ ಘಟಕ ಕಾರ್ಯ ನಿರ್ವಹಿಸಬೇಕು ಅದಕ್ಕೆ ಬೇಕಾದ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ವಾಟೆಹೊಳೆ ಮತ್ತು ಯಗಚಿ ಅಣೆಕಟ್ಟಿನಿಂದ ಹರಿಯುವ ವಿತರಣೆ ನಾಲೆಗಳು ಸರಿಯಾದ ನಿರ್ವಹಣೆ ಇಲ್ಲದೆ ಶೀತಲಗೊಂಡಿದ್ದು ನಾಲೆಗಳನ್ನು ಪುನಃಶ್ಚೇತನಗೊಳಿಸಿದರೆ ಸುಮಾರು 18 ಸಾವಿರ ಎಕರೆ ಪ್ರದೇಶಕ್ಕೆ ನೀರು ಹಾಯಿಸಬಹುದು ಈ ಬಗ್ಗೆ ಇಂಜಿನಿಯರ್ ಗಳು ನಾಲೆಗಳ ಪುನಃಶ್ಚೇತನ ಬೇಕಾದ ಅನುದಾನಕ್ಕಾಗಿ ಅಂದಾಜು ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿ :
ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಸಣ್ಣಪುಟ್ಟ ಕೆಲಸಗಳಿಗೂ ಜನರು ತಿಂಗಳುಗಟ್ಟಲೆ ತಹಶೀಲ್ದಾರ್ ಕಚೇರಿ ಅಲೆದಾಡಬೇಕಿದೆ. ಅಧಿಕಾರಿಗಳು ಜನಸಾಮಾನ್ಯರಿಗೆ ವಿನಾಃ ಕಾರಣ ಸತಾಯಿಸಿದರೇ ಸಹಿಸುವುದಿಲ್ಲ ಎಂದು ಹೇಳಿದರು.
ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಅಧಿಕಾರಿಗಳು ಆಸಕ್ತಿ ವಹಿಸಿಬೇಕು. ಭೂ ಕಬಳಿಕೆ ನಿರಂತರವಾಗಿ ನಡೆದಿದ್ದು, ಭೂ ಕಬಳಿಕೆ ಆಗದಂತೆ ತಡೆಯುವುದು ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುವುದು ಅಥವಾ ಭೂ ಕಬಳಿಕೆ ಆಗದಂತೆ ಗಮನಹರಿಸುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿದೆ.
ಈ ಹಿಂದೆ ತಾಲೂಕಿನಲ್ಲಿ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಬಳಕೆಗೆಂದು ದಾನ ನೀಡಿರುವ ಜಾಗವನ್ನು ಸರ್ಕಾರದ ಖಾತೆ ಹೆಸರಿಗೆ ಖಾತೆ ಮಾಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳನ್ನು ಅಧಿಕಾರಿಗಳು ಗುರುತಿಸಿ ಮಾಹಿತಿ ನೀಡಬೇಕು. ಸರ್ಕಾರಿ ಜಾಗಗಳಿದ್ದರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಾಯಕವಾಗುತ್ತದೆ ಎಂದರು.
ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಹಾಯಕ ನಿರ್ದೇಶಕ ನೀಡಿದ ಅಸಮಂಜಸ ಮಾಹಿತಿಗಳ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿ, ಇಲಾಖೆಯ ವತಿಯಿಂದ ನೀಡುವ ಯೋಜನೆಗಳು ಜನರಿಗೆ ತಲುಪುತ್ತಿಲ್ಲವೆಂಬ ದೂರುಗಳಿವೆ. ಈ ಬಗ್ಗೆ ನೀವು ನೀಡಿರುವ ಫಲಾನುಭವಿಗಳ ತೋಟಗಳಿಗೆ ಖುದ್ದು ತೆರಳಿ ಪರಿಶೀಲನೆ ಮಾಡುವುದಾಗಿ ಎಚ್ಚರಿಸಿದರು.
ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡಮಕ್ಕಳಿಗೆ ಶಿಕ್ಷಣ ಕೊಡಲು ಸಾಧ್ಯ. ಇಲ್ಲದಿದ್ದರೆ ಶಿಕ್ಷಣ ಎಂಬುದು ಬಡವರ ಮಕ್ಕಳಿಗೆ ಗಗನ ಕುಸುಮವಾಗಲಿದೆ ಆದ್ದರಿಂದ ಶಾಲೆಗಳ ಉಳುವಿಗೆ ಅಧಿಕಾರಿಗಳು ಶ್ರಮಿಸುವಂತೆ ತಿಳಿಸಿದರು.
ತಕ್ಷಣ ವಿದ್ಯುತ್ ಸಂಪರ್ಕ ನೀಡಿ:
ಕುಡಿಯುವ ನೀರಿಗೆ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ಬಾಕಿ ಇರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕುಡಿಯುವ ನೀರು ಒದಗಿಸಬೇಕು. ಬಿಲ್ ಪಾವತಿ ಮಾಡದೆ ಇರುವ ಗ್ರಾಮ ಪಂಚಾಯಿತಿ, ಅಂಗನವಾಡಿ, ಶಾಲೆಗಳಿಗೆ ವಿದ್ಯುತ್ ಸಂಪರ್ಕ ಕಡಿಗೊಳಿಸದೆ ಬಿಲ್ ಪಾವತಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮಪಂಚಾಯಿತಿಗಳ ಮೂಲಕ ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ನೀಡಲಾಗುತ್ತಿದೆಯೆಂಬ ಬಗ್ಗೆ ಶಾಸಕರು ಮಾಹಿತಿ ಕೇಳಿದರು.
ಇದೇ ವೇಳೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ, ವೈದ್ಯರ ನಿರ್ಲಕ್ಷಕ್ಕೆ ಮೃತ ಪಟ್ಟ ನವಿದ್ ಅಹಮದ್ ಶರೀಪ್ ಪುತ್ರಿಗೆ ಸರ್ಕಾರಿ ಆಸ್ಪತ್ರೆ ಗಣಕಯಂತ್ರ ಆಪರೇಟರ್ ಹುದ್ದೆಗೆ ಮಂಜೂರಾತಿ ಪತ್ರವನ್ನು ಶಾಸಕರು ನೀಡಿದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಬ್ರಮಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.










