ಬೆಂಗಳೂರು: ಮಲೆನಾಡು‌ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಗೆ ಹೈಕೋರ್ಟ್ ನಲ್ಲಿ ಹಿನ್ನಡೆ: 30ಕ್ಕೆ ಅಂತಿಮ ವಿಚಾರಣೆ

ಬೆಂಗಳೂರು: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಹಗ್ಗ ಜಗ್ಗಾಟ ಮುಂದುವರೆದಿದ್ದು ಆಡಳಿತ ನಿರ್ವಹಣೆಗಿದ್ದ ಅಡ್ಡಿಯನ್ನು ಈಚೆಗಷ್ಟೇ ಜಿಲ್ಲಾ ನ್ಯಾಯಾಲಯದ ಆದೇಶದ ಮೂಲಕ ನಿವಾರಿಸಿಕೊಂಡಿದ್ದ ಸಮಿತಿ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ ಅವರ ತಂಡಕ್ಕೆ ಸೋಮವಾರ ಉಚ್ಚ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.

ಮುಂದಿನ ವಿಚಾರಣೆವರೆಗೂ ಆಡಳಿತ ಮಂಡಳಿ ಯಾವುದೇ ಸಭೆ ನಡೆಸುವಂತಿಲ್ಲ ಹಾಗೂ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೋಮವಾರ ಆದೇಶ ಪ್ರಕಟಿಸಿದೆ.

ಜಿಲ್ಲಾ ನ್ಯಾಯಾಲಯ ಜ. 14ರಂದು ನೀಡಿದ್ದ ಆದೇಶ ಪ್ರಶ್ನಿಸಿ ನಿರ್ದೇಶಕರಾದ ಬಿ.ಆರ್. ಗುರುದೇವ್, ಜಿ.ಟಿ.ಕುಮಾರ್ ಹಾಗೂ ಡಾ. ಅವರವಿಂದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರ ಪೀಠ ಇದೇ 30ರಂದು ಅಂತಿಮ ವಿಚಾರಣೆ ನಡೆಯಲಿದ್ದು ಆವರೆಗೂ ಈ ಹಿಂದಿನ ಆದೇಶವನ್ನೇ ಪಾಲಿಸುವಂತೆ ಆದೇಶಿಸಿತು.

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ಮಂಡನೆಯಂದು ಆರಂಭವಾದ ಮೇಲಾಟ ಈಗ ಹೈಕೋರ್ಟ್ ಅಂಗಳ ತಲುಪಿದ್ದು, ನ್ಯಾಯಾಲಯದ ಅಂತಿಮ ಆದೇಶದ ಬಗ್ಗೆ ಎಲ್ಲರಲ್ಲಿ ಕುತೂಹಲ ಮೂಡಿದೆ.