ಚಿಕ್ಕಮಗಳೂರು: ಕೊಪ್ಪ ಪಟ್ಟಣ ಇಂದು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿ ಬಂದ್ ಆಗಿ ಸ್ತಬ್ಧವಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಶಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿದ್ದವು.
ಜೂನ್ 30ರಂದು ಶಾಲೆಯ ಶೌಚಾಲಯದಲ್ಲಿ ಶಮಿತಾ ಎಂಬ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಶಾಲೆಯ ಶೌಚಾಲಯದಲ್ಲಿ ಎರಡು ವರ್ಷಗಳ ಹಿಂದೆ ಮತ್ತೊಬ್ಬ ಬಾಲಕಿ ಕೂಡ ಇದೇ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿಚಾರ ಮುನ್ನೆಲೆಗೆ ಬಂದಿದೆ.
ಒಂದೇ ಶಾಲೆ, ಒಂದೇ ಸ್ಥಳ, ಒಂದೇ ಶೈಲಿ – ಇಬ್ಬರು ಮಕ್ಕಳ ಆತ್ಮಹತ್ಯೆ ಎಂಬ ಸಂಗತಿ ಸಾರ್ವಜನಿಕರಲ್ಲಿ ಭಾರಿ ಅನುಮಾನಕ್ಕೆ ಕಾರಣವಾಗಿದೆ. ಒಂದೇ ರಾಡ್ ಗೆ ಇಬ್ಬರು ವಿದ್ಯಾರ್ಥಿನಿಯರು ಒಂದೇ ರೀತಿಯಲ್ಲಿ ನೇಣು ಹಾಕಿಕೊಂಡಿರುವುದರಿಂದ ಪ್ರಕರಣದಲ್ಲಿ ಗಂಭೀರ ಲೋಪವಿದೆ ಎಂದು ಪೋಷಕರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
ಪೊಲೀಸರ ವರದಿಯಲ್ಲಿ ತೊಂದರೆಗಳಿದ್ದು, ನಿಜಾಂಶ ಹೊರಬರಲು ಉನ್ನತ ಮಟ್ಟದ ತನಿಖೆ ನಡೆಯಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೊಪ್ಪ ತಾಲೂಕಿನ ಜನರು ಒತ್ತಾಯಿಸಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಯಿತು.










