ಹಾಸನ:ರಾಜ್ಯ ಸರ್ಕಾರದಿಂದ ಸೆ.22ರಿಂದ ಅ.7ರ ವರೆಗೆ ನಡೆಯಲಿರುವ ಜನಗಣತಿ ಹಿನ್ನೆಲೆ ಜಿಲ್ಲಾ ಶ್ರೀ ವೀರಶೈವ-ಲಿಂಗಾಯತ ಸಂಘ, ಸಮಾಜದ ಬಂಧುಗಳು ಶಕ್ತಿ ಪ್ರದರ್ಶನ ಅನಾವರಣ ಉದ್ದೇಶದಿಂದ ಎಲ್ಲರೂ ಒಂದೇ ರೀತಿಯ ವಿವರ ದಾಖಲಿಸಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಐಸಾಮಿಗೌಡ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹುಬ್ಬಳ್ಳಿ ಮಹಾನಗರದಲ್ಲಿ ಸೆ.19ರಂದು ನಡೆದ ವೀರಶೈವ-ಲಿಂಗಾಯತ ಏಕತಾ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಸಮಾಜದ ಗಣ್ಯರ ಸಮ್ಮುಖದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಕರೆಯಂತೆ ಸಮಾಜದಲ್ಲಿ ಒಗ್ಗಟ್ಟು ಕಾಪಾಡಿ, ಸಮೂಹಬದ್ಧ ಶಕ್ತಿ ಪ್ರದರ್ಶನಗೊಳಿಸುವ ಉದ್ದೇಶದಿಂದ ಜನಗಣತಿಯಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ವಿವರ ದಾಖಲಿಸಬೇಕೆಂದು ಒಮ್ಮತವಾಗಿ ನಿರ್ಧರಿಸಲಾಯಿತು.
ನಮೂದಿಸಬೇಕಾದ ವಿವರಗಳೆಂದರೆ
ಕಾಲಂ 8(ಧರ್ಮ): ಹಿಂದೂ, ಕಾಲಂ 9 (ಜಾತಿ): ವೀರಶೈವ-ಲಿಂಗಾಯತ, ಕಾಲಂ 10 (ಉಪ ಜಾತಿ): ತಮ್ಮ ತಮ್ಮ ಉಪಪಂಗಡದ ಹೆಸರು ನಮೂದಿಸಬೇಕೆಂದರು. ಜನಗಣತಿಯಲ್ಲಿ ಒಂದೇ ರೀತಿ ನಮೂದು ಮಾಡುವ ಮೂಲಕ ಸಮಾಜದ ಬಲವನ್ನು ಸರ್ಕಾರದ ಮುಂದೆ ತೋರಿಸುವುದು ಅತ್ಯಗತ್ಯ.
ಸಮಯ ಕಡಿಮೆ ಇರುವುದರಿಂದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಂಘ-ಸಂಸ್ಥೆಗಳು ತ್ವರಿತವಾಗಿ ಪ್ರಚಾರ ಕೈಗೊಂಡು ಸಮಾಜದ ಪ್ರತಿಯೊಬ್ಬ ಬಂಧುವಿಗೂ ಮಾರ್ಗದರ್ಶನ ನೀಡಬೇಕು ಎಂದು ಕೋರಲಾಗಿದೆ. ಸಮಾಜದ ಅಭಿಪ್ರಾಯವನ್ನು ಸರಿಯಾಗಿ ತಲುಪಿಸುವ ದೃಷ್ಟಿಯಿಂದ ನಿಖರ ಮಾಹಿತಿ ದಾಖಲಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಿರಣ್ ಕುಮಾರ್ ಹೊಸಮನಿ, ಕಾರ್ಯದರ್ಶಿ ಈ.ಎಂ. ರುದ್ರಕುಮಾರ್, ಸಹ ಕಾರ್ಯದರ್ಶಿ ಹೆಚ್.ಮಲ್ಲಿಕಾರ್ಜುನ್,ಜಂಟಿ ಕಾರ್ಯದರ್ಶಿ ಬಿ.ವಿ. ಲತೇಶ್ ಕುಮಾರ್, ನಿರ್ದೇಶಕ ಬಿ.ಎ. ನಾಗೇಶ್ ಇತರಿದ್ದರು.










