22.1 C
Munich
Home News HD Kumaraswamy: ‘ಅಮ್ಮನ ಮನಸ್ಸು ನೋಯಿಸಿದ್ದೇನೆ, ಇನ್ನು ಮುಂದೆ ತಪ್ಪಾಗದು’ – ತಾಯಿ ಅಂತ್ಯಕ್ರಿಯೆಯಲ್ಲಿ ಭಾವುಕರಾಗಿ...

HD Kumaraswamy: ‘ಅಮ್ಮನ ಮನಸ್ಸು ನೋಯಿಸಿದ್ದೇನೆ, ಇನ್ನು ಮುಂದೆ ತಪ್ಪಾಗದು’ – ತಾಯಿ ಅಂತ್ಯಕ್ರಿಯೆಯಲ್ಲಿ ಭಾವುಕರಾಗಿ ದಿಟ್ಟ ಸಂಕಲ್ಪ

ಬೆಂಗಳೂರು/ಹೊಳೆನರಸೀಪುರ, ಜು.21: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಅಂತ್ಯಸಂಸ್ಕಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಭಾವಪೂರ್ಣವಾಗಿ ನೆರವೇರಿತು. ಈ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಾಯಿಯನ್ನು ನೆನೆದು ಭಾವುಕರಾಗಿ ಮಾತನಾಡಿದ್ದು, ಅವರ ಮಾತುಗಳು ಅಲ್ಲಿದ್ದ ಸಾವಿರಾರು ಜನರ ಮನಸ್ಸನ್ನು ಮಿಡಿಯುವಂತೆ ಮಾಡಿವೆ.

72 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ದೇವೇಗೌಡರು ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದ ದೃಶ್ಯ ಅಂತಿಮ ಯಾತ್ರೆಯ ಅತ್ಯಂತ ಭಾವುಕ ಕ್ಷಣವಾಗಿ ಉಳಿಯಿತು. ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಸಾವಿರಾರು ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳಿದರು.

ಅಂತ್ಯಸಂಸ್ಕಾರದ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮಾತನಾಡಿದ ಕುಮಾರಸ್ವಾಮಿ, “ಯಾವುದೋ ಒಂದು ಸಂದರ್ಭದಲ್ಲಿ ನಾನು ಅಮ್ಮನ ಮನಸ್ಸನ್ನು ನೋಯಿಸಿರಬಹುದು. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು ತಾಯಿ. ಇನ್ನು ಮುಂದೆ ಅಂತಹ ತಪ್ಪು ಮರುಕಳಿಸುವುದಿಲ್ಲ” ಎಂದು ಕಣ್ಣೀರಿನ ನಡುವೆ ಹೇಳಿದರು.

ಅಲ್ಲದೆ, “ಅಮ್ಮ ಯಾವ ರೀತಿಯ ಜೀವನ ಮೌಲ್ಯಗಳನ್ನು ಪಾಲಿಸುತ್ತಿದ್ದರೋ, ನಾನು ಮಣ್ಣಿಗೆ ಸೇರುವ ದಿನದವರೆಗೂ ಅದೇ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಿದ್ದೇನೆ. ನನ್ನ ತಾಯಿಯ ಗೌರವಕ್ಕೆ ಎಂದಿಗೂ ಸಣ್ಣ ಚ್ಯುತಿಯೂ ಬಾರದಂತೆ ಬದುಕುತ್ತೇನೆ” ಎಂದು ಭಾವುಕರಾಗಿ ನುಡಿದರು.

ಕುಮಾರಸ್ವಾಮಿ ಅವರು ತಮ್ಮ ತಾಯಿಯು ಸದಾ ತಂದೆ ಎಚ್.ಡಿ. ದೇವೇಗೌಡರಿಗೆ ನೋವು ಕೊಡಬಾರದು ಎಂದು ಹೇಳುತ್ತಿದ್ದ ಮಾತುಗಳನ್ನು ಸ್ಮರಿಸಿಕೊಂಡು, ಆ ಮೌಲ್ಯಗಳನ್ನು ಜೀವನದುದ್ದಕ್ಕೂ ಪಾಲಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಯಿಯ ನಿಧನದಿಂದ ಅಂತ್ಯಸಂಸ್ಕಾರದವರೆಗೆ ಎಲ್ಲಾ ರೀತಿಯ ಸಹಕಾರ ನೀಡಿದ ರಾಜ್ಯ ಸರ್ಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರಿಗೆ ಧನ್ಯವಾದ ಅರ್ಪಿಸಿದರು.

ಅಂತ್ಯಸಂಸ್ಕಾರದ ಬಳಿಕ ಸಾಮಾಜಿಕ ಜಾಲತಾಣದಲ್ಲಿಯೂ ಭಾವುಕ ಸಂದೇಶ ಹಂಚಿಕೊಂಡಿರುವ ಕುಮಾರಸ್ವಾಮಿ, “ನನ್ನ ಪಾಲಿಗೆ ಅಮ್ಮ ಎಂದೆಂದಿಗೂ ಅನಂತ. ಅವರು ದೇಹತಃ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಕೊಟ್ಟ ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಬದುಕಿನ ಪಾಠಗಳು ನನ್ನ ಜೀವನದ ಶಾಶ್ವತ ಆಸ್ತಿ” ಎಂದು ಬರೆದುಕೊಂಡಿದ್ದಾರೆ.

error: Content is protected !!