ಸ್ಕಾಲರ್ಸ್ ಶಾಲೆಯಲ್ಲಿ ಕಳೆಗಟ್ಟಿದ ಶ್ರೀಕೃಷ್ಣ ಜನ್ಮಾಷ್ಟಮಿ: ಬೆಣ್ಣೆ ಕೃಷ್ಣರಾಗಿ, ಮುದ್ದಾಗಿ ಕಂಗೊಳಿಸಿದ ಪುಟಾಣಿಗಳು
ಶಾಲಾ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಾಲ ನವನೀತರಿಗೆ ಬೆಣ್ಣೆಯನ್ನು ತಿನ್ನಿಸುವ ಮೂಲಕ ಉದ್ಘಾಟಿಸಿ, ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಶ್ರೀಕೃಷ್ಣನ ಜೀವನ, ಬೋಧನೆಗಳು ಹಾಗೂ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವ ಸದುದ್ದೇಶದಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಗಮನ ಸೆಳೆದ ಪುಟಾಣಿ ರಾಧಾ-ಕೃಷ್ಣರು
ಹಬ್ಬದ ಅಂಗವಾಗಿ ಶಾಲೆಯ ಪುಟಾಣಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು. ಬಣ್ಣಬಣ್ಣದ ವಸ್ತ್ರಗಳು, ತಲೆಗೊಂದು ಕಿರೀಟ, ಕೈಯಲ್ಲಿ ಕೊಳಲು ಹಿಡಿದು ಸುಂದರ ಅಲಂಕಾರದಲ್ಲಿ ಮುದ್ದಾಗಿ ಕಂಗೊಳಿಸಿದರು. ರಾಧಾ-ಕೃಷ್ಣರ ವೇಷದಲ್ಲಿದ್ದ ಮಕ್ಕಳ ನಗು, ಮುಗ್ಧತೆ ಮತ್ತು ಉತ್ಸಾಹ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಪುಟಾಣಿಗಳು ನೀಡಿದ ನೃತ್ಯ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಸಂಸ್ಕೃತಿ ಮತ್ತು ಮೌಲ್ಯಗಳ ಪರಿಚಯ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಪರಮೇಶ್ವರ ಭಟ್ಟರವರು ಮಾತನಾಡಿ, ಶ್ರೀಕೃಷ್ಣನ ಬಾಲಲೀಲೆಗಳು, ಧರ್ಮ, ಸತ್ಯ, ಪ್ರೀತಿ ಮತ್ತು ಕರ್ತವ್ಯದ ಮಹತ್ವವನ್ನು ಮಕ್ಕಳಿಗೆ ಎಳೆಎಳೆಯಾಗಿ ವಿವರಿಸಿದರು. “ಮಕ್ಕಳ ಸಕ್ರಿಯ ಭಾಗವಹಿಸುವಿಕೆಯಿಂದ ಶಾಲಾ ಆವರಣವು ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಬ್ಬಗಳ ಮಹತ್ವ ಸಾರುವ ಉದ್ದೇಶ
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಡಾ. ಎಚ್. ಎನ್. ಚಂದ್ರಶೇಖರ್ ಅವರು ಮಾತನಾಡಿ, “ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಹಬ್ಬಗಳ ಮಹತ್ವವನ್ನು ಸಂತೋಷದಿಂದ ಅನುಭವಿಸುವ ಅವಕಾಶ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ತಿಳಿಸುತ್ತಾ ಪುಟಾಣಿ ಗೋಪಿ-ಗೋಪಿಕೆಯರಿಗೆ ಶುಭಕೋರಿದರು.
ಈ ಸುಂದರ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಶ್ರೀಮತಿ ಮಮತಾ ಚಂದ್ರಶೇಖರ್, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದು, ಸಂಭ್ರಮದಲ್ಲಿ ಪಾಲ್ಗೊಂಡು ಪುಟಾಣಿ ರಾಧಾ-ಕೃಷ್ಣರಿಗೆ ಶುಭಾಶಯಗಳನ್ನು ಕೋರಿದರು. ಜನ್ಮಾಷ್ಟಮಿ ಆಚರಣೆಯು ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯಗಳು, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಸುಂದರ ಅನುಭವವಾಗಿ ಮೂಡಿಬಂದಿತು.












