Holenarasipuraಹೊಳೆನರಸೀಪುರ, ಮಾರ್ಚ್ 2: ಪಟ್ಟಣದ ಐತಿಹಾಸಿಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಮಂಗಳವಾರ ನಡೆಯಲಿದ್ದು, ರಥಕ್ಕೆ ತೊಡಿಸಿದ್ದ ಬಟ್ಟೆ ತೆರವುಗೊಳಿಸಿದ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ.
ಜಿಲ್ಲಾಡಳಿತ ನಿರ್ದೇಶನದಂತೆ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ರಥಕ್ಕೆ ತೊಡಿಸಿದ್ದ ವಸ್ತ್ರವನ್ನು ತೆಗೆಸಿದ ಕ್ರಮದ ವಿರುದ್ಧ ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.
ಇದೇ ವೇಳೆ ಮಂಗಳವಾರ ಮಧ್ಯಾಹ್ನ 3.45ಕ್ಕೆ ಸಂಭವಿಸುವ ಚಂದ್ರಗ್ರಹಣದ ಸಮಯದಲ್ಲೇ ರಥೋತ್ಸವ ನಡೆಯುತ್ತದೆಯೇ? ಎಂಬ ಆತಂಕವೂ ಭಕ್ತರಲ್ಲಿ ಮೂಡಿದೆ.
ಸಭೆಗೆ ಆಹ್ವಾನಿಸಿಲ್ಲವೆಂದು ರೇವಣ್ಣ ಆಕ್ರೋಶ
ರಥೋತ್ಸವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಗೆ ಶಾಸಕರನ್ನು ಆಹ್ವಾನಿಸದ ವಿಚಾರಕ್ಕೆ ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮೂರ ಜಾತ್ರೆ ಸಂಬಂಧ ಸಭೆ ನಡೆಸುವಾಗ ಶಾಸಕರನ್ನು ಕರೆಯದೇ ನಿರ್ಣಯ ಕೈಗೊಳ್ಳುವುದು ಹೇಗೆ? ಶಾಸಕರನ್ನು ನಿಮ್ಮ ಗುಲಾಮರೆಂದುಕೊಂಡಿದ್ದೀರಾ?” ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಅವರನ್ನು ಪ್ರಶ್ನಿಸಿದರು.
ಇನ್ನು ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ನಿರ್ಣಯದಂತೆ ರಥಕ್ಕೆ ಬಟ್ಟೆ ತೊಡಿಸಲಾಗಿತ್ತು. ಇದೀಗ ಅದನ್ನು ತೆಗೆಸಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದರು. ನಾಳೆ ಯಾವುದೇ ಅಹಿತಕರ ಘಟನೆ ನಡೆದರೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದರು.
ರಥೋತ್ಸವಕ್ಕೆ ಅಡ್ಡಿ ಆಗಬಾರದು: ಕಾರ್ಯಕರ್ತರ ಒತ್ತಾಯ
ಜೆಡಿಎಸ್ ಕಾರ್ಯಕರ್ತರು “ಹಿಂದಿನ ವರ್ಷದಂತೆ ಬಟ್ಟೆ ತೊಡಿಸಿ ರಥೋತ್ಸವ ನಡೆಸಬೇಕು” ಎಂದು ಒತ್ತಾಯಿಸಿದರು.
ಮತ್ತೊಂದೆಡೆ ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ರಥೋತ್ಸವ ಸಂಬಂಧ ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರಕ್ಕೆ ತಾವು ಬೆಂಬಲ ನೀಡುವುದಾಗಿ ಹೇಳಿದರು.
“ರಥಕ್ಕೆ ತೊಡಿಸುವ ಹೊಸ ಬಟ್ಟೆಗೆ ನಾನು ದೇಣಿಗೆ ನೀಡಿದ ಬಳಿಕ ಈ ಸಮಸ್ಯೆ ಉಂಟಾಗಿದೆ. ಬೇಕಾದರೆ ನನ್ನ ದೇಣಿಗೆಯನ್ನು ಹಿಂತಿರುಗಿಸಿ. ಆದರೆ ರಥೋತ್ಸವಕ್ಕೆ ಯಾವುದೇ ಅಡ್ಡಿ ಆಗಬಾರದು,” ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು “ಹೊಸ ಬಟ್ಟೆ ತೊಡಿಸಿ ರಥೋತ್ಸವ ನಡೆಸಬೇಕು” ಎಂದು ಘೋಷಣೆ ಕೂಗಿದರು.
ಅಧಿಕಾರಿಗಳ ಮನವಿ
ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಮಾತನಾಡಿ, ರಥೋತ್ಸವ ಸುಸೂತ್ರವಾಗಿ ನಡೆಯಲು ಎಲ್ಲರೂ ಒಮ್ಮತದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಡಿವೈಎಸ್‌ಪಿ ಮಹಮದ್ ಹಸ್ಮತ್ ಖಾನ್ ಕೂಡ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್ಪಿ ಶ್ರೀನಿಧಿ, ವೃತ್ತ ನಿರೀಕ್ಷಕ ಸಂತೋಷ್ ಎಸ್., ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸಾರ್ವಜನಿಕರ ಆಕ್ರೋಶ
ಐತಿಹಾಸಿಕ ಹಿನ್ನೆಲೆಯ ಈ ರಥೋತ್ಸವ ಹಲವು ವರ್ಷಗಳಿಂದ ನಿರ್ವಿಘ್ನವಾಗಿ ನಡೆಯುತ್ತಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳಿಂದ ಭಕ್ತರಲ್ಲಿ ಗೊಂದಲ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಿಮ್ಮ ಸ್ವಪ್ರತಿಷ್ಠೆ ಬಿಟ್ಟು ನಮ್ಮೂರ ಜಾತ್ರೆ ನಡೆಯಲು ಬಿಡಿ” ಎಂದು ಸಾರ್ವಜನಿಕರು ಆಗ್ರಹಿಸಿದರು.
ರಥಕ್ಕೆ ಬಟ್ಟೆ ತೊಡಿಸುವ ವಿಚಾರದಲ್ಲಿ ಅನಗತ್ಯ ವಿವಾದ ಉಂಟಾಗುತ್ತಿದ್ದು, ಇದರಿಂದ ಭಕ್ತರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.










