ಸಕಲೇಶಪುರ (ಹಾಸನ): ಹೇಮಾವತಿ ಜಲಾಶಯ ಸಂತ್ರಸ್ತರಿಗೆ ನೀಡಬೇಕಿದ್ದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮಂಜೂರು ಮಾಡಿದ ಹಗರಣ ಇದೀಗ ಬೃಹತ್ ಸ್ವರೂಪ ಪಡೆದುಕೊಂಡಿದೆ. ತಪ್ಪಿತಸ್ಥರ ಪಟ್ಟಿ ಸಿದ್ಧವಾಗುತ್ತಿದ್ದಂತೆ ಬಂಧನದ ಭೀತಿಯಿಂದ ಕಂದಾಯ ಹಾಗೂ ಭೂಮಾಪನಾ ಇಲಾಖೆಯ ನೂರಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮೂಹಿಕ ರಜೆ ಮೇಲೆ ತೆರಳಿರುವುದು ತೀವ್ರ ಸಂಚಲನ ಮೂಡಿಸಿದೆ.
ಕೆಲವು ಅಧಿಕಾರಿಗಳಂತೂ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಚೇರಿಗೆ ಗೈರಾಗಿದ್ದಾರೆ. ಇದರಿಂದಾಗಿ ಸಕಲೇಶಪುರ ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಇಲ್ಲದೇ ಖಾಲಿ ಕುರ್ಚಿಗಳು ದರ್ಶನ ನೀಡುತ್ತಿವೆ.
ಏನಿದು ಪ್ರಕರಣ?
ಹೇಮಾವತಿ, ಯಗಚಿ ಹಾಗೂ ವಾಟೆಹೊಳೆ ಜಲಾಶಯಗಳ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಸುಮಾರು 10 ಸಾವಿರ ರೈತರಿಗೆ ವಿತರಿಸಲು ಜಿಲ್ಲೆಯ ವಿವಿಧೆಡೆ ಭೂಮಿ ಕಾದಿರಿಸಲಾಗಿತ್ತು. ಆದರೆ, ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಅನರ್ಹ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದರು.
2005ರಿಂದ 2019ರವರೆಗಿನ ಅವಧಿಯಲ್ಲಿ ನಡೆದ ಇಂತಹ ಒಟ್ಟು 977 ಪ್ರಕರಣಗಳನ್ನು ಕಂದಾಯ ಇಲಾಖೆಯ ಪುನರ್ವಸತಿ ಆಯುಕ್ತರಾಗಿದ್ದ ಮೊಹಮ್ಮದ್ ಮೊಹಸಿನ್ ಗುರುತಿಸಿದ್ದರು. ಈ ಪೈಕಿ 535 ಪ್ರಕರಣಗಳಲ್ಲಿ ಭೂ ಮಂಜೂರಾತಿ ರದ್ದುಪಡಿಸಿ ಜಮೀನನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ 442 ಪ್ರಕರಣಗಳು ಅರಣ್ಯ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಬಾಕಿ ಉಳಿದಿವೆ.
ರಜೆಗೆ ಕಾರಣವೇನು?
ಇತ್ತೀಚೆಗಷ್ಟೇ ಬೇಲೂರಿನ ಬಗರ್ಹುಕುಂ ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸೇರಿ 16 ಜನರನ್ನು ಬಂಧಿಸಲಾಗಿತ್ತು. ಅಲ್ಲದೆ, ಪಿರಿಯಾಪಟ್ಟಣ ತಾಲ್ಲೂಕಿನ ಭೂಮಾಪನಾ ಇಲಾಖೆಯ ಎಂಟು ಮಂದಿಯನ್ನೂ ಬಂಧಿಸಲಾಗಿತ್ತು. ಈ ಬೆಳವಣಿಗೆಯಿಂದ ತೀವ್ರ ಆತಂಕಕ್ಕೊಳಗಾಗಿರುವ 2015ರಿಂದ 2019ರ ಅವಧಿಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳು, ಪೊಲೀಸರ ಕಾರ್ಯಾಚರಣೆಯ ಭೀತಿಯಿಂದ ಕಚೇರಿಯತ್ತ ಮುಖ ಮಾಡುತ್ತಿಲ್ಲ.
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹೊಳೆನರಸೀಪುರ ಮತ್ತು ಅರಕಲಗೂಡು ತಾಲ್ಲೂಕುಗಳಲ್ಲಿ ಕೆಲಸ ಮಾಡಿದ್ದ ಹಾಗೂ ಈಗಲೂ ಕೆಲಸ ಮಾಡುತ್ತಿರುವ ತಹಶೀಲ್ದಾರರು, ಉಪ ತಹಶೀಲ್ದಾರರು ಸೇರಿ 150ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಈ ಹಗರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವುದು ತನಿಖಾ ವರದಿಯಲ್ಲಿ ದಾಖಲಾಗಿದೆ.
ಅಧಿಕಾರಿಗಳ ಪ್ರತಿಕ್ರಿಯೆ:
“ಎಚ್ಆರ್ಪಿ ಭೂ ಹಗರಣದಲ್ಲಿ 141 ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ.”
— ಮಂಜುನಾಥ್, ಎಚ್ಆರ್ಪಿ ವಿಶೇಷ ಭೂಸ್ವಾಧೀನಾಧಿಕಾರಿ
“ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸೇರಿ 16 ಸಿಬ್ಬಂದಿ ರಜೆ ಮೇಲೆ ತೆರಳಿದ್ದಾರೆ. ಇದರಿಂದ ಕಚೇರಿಯ ಕೆಲಸಕ್ಕೆ ತೊಂದರೆ ಆಗಿದೆ.”
— ಸುಪ್ರೀತಾ, ಸಕಲೇಶಪುರ ತಹಶೀಲ್ದಾರ್
ಈ ನಡುವೆ ಹೆಸರು ಹೇಳಲಿಚ್ಛಿಸದ ಕಂದಾಯ ಇಲಾಖೆ ನೌಕರರೊಬ್ಬರು, “ನಾವು ತಹಶೀಲ್ದಾರ್ ಅವರ ನಿರ್ದೇಶನದಂತೆ ಸ್ಥಳ ಪರಿಶೀಲನೆಗೆ ಹೋಗಿ ಸಹಿ ಹಾಕಿದ್ದೇವೆ. ದೋಷಾರೋಪ ಪಟ್ಟಿಯಲ್ಲಿ ನನ್ನ ಹೆಸರೂ ಇದೆ, ಆದರೆ ನನಗೇನೂ ಭಯ ಇಲ್ಲ. ತನಿಖಾಧಿಕಾರಿಗಳ ಮುಂದೆ ಸತ್ಯ ಹೇಳುತ್ತೇನೆ,” ಎಂದು ಸ್ಪಷ್ಟಪಡಿಸಿದ್ದಾರೆ.
Story Credit: janekere R Paramesh, Prajavani












