ಹಾಸನ (Kannada Post): ನಗರದಲ್ಲಿ ಹಾಡುಹಗಲೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ದುಷ್ಕರ್ಮಿಗಳು ವ್ಯಕ್ತಿಯೋರ್ವನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಭೀಕರ ಘಟನೆ ಹಾಸನ ನಗರದ ಚನ್ನಪಟ್ಟಣ ಬೈಪಾಸ್ನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಕಪ್ಪೆ, ಮಣಿ ಅಲಿಯಾಸ್ ಮಣಿಕಂಠ (34) ಎಂದು ಗುರುತಿಸಲಾಗಿದೆ. ಹಂತಕರು ಕೃತ್ಯವೆಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಯಾರು ಈ ಮಣಿಕಂಠ?
ಮೂಲತಃ ಹಾಸನ ತಾಲ್ಲೂಕಿನ, ಕಟ್ಟಾಯ ಹೋಬಳಿಯ ಕಲ್ಲಹಳ್ಳಿ ಗ್ರಾಮದವನಾದ ಮಣಿಕಂಠ, ಪ್ರಸ್ತುತ ಹಾಸನದ ಸಿದ್ಧಯ್ಯನಗರದಲ್ಲಿ ತನ್ನ ಪೋಷಕರೊಂದಿಗೆ ವಾಸವಿದ್ದನು. ಈತ ನಗರದ 80 ಅಡಿ ರಸ್ತೆಯಲ್ಲಿರುವ ‘ಭಾರತ್ ಪೆಟ್ರೋಲ್ ಬಂಕ್’ನಲ್ಲಿ ಕೆಲಸ ಮಾಡುತ್ತಿದ್ದನು.
ಗೃಹಪ್ರವೇಶಕ್ಕೆಂದು ಹೋದವನು ಶವವಾದ!
ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ, ಪರಿಚಿತರ ‘ಗೃಹಪ್ರವೇಶ ಕಾರ್ಯಕ್ರಮವಿದೆ’ ಎಂದು ಹೇಳಿ ಮಣಿಕಂಠ ಪೆಟ್ರೋಲ್ ಬಂಕ್ನಿಂದ ಹೊರಟಿದ್ದನು. ಆದರೆ, ಆತ ಚನ್ನಪಟ್ಟಣ ಬೈಪಾಸ್ ಬಳಿ ತೆರಳುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು, ಏಕಾಏಕಿ ದಾಳಿ ನಡೆಸಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ:
ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭನ್ವಿತಾ ಹಾಗೂ ಬೆರಳಚ್ಚು ತಜ್ಞರ (SOCO) ತಂಡ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಭೀಕರ ಹತ್ಯೆ ಪ್ರಕರಣವು ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಹಂತಕರಿಗಾಗಿ ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.












