Hemavathi ಹೇಮಾವತಿ ನದಿ ಒಡಲಿಗೆ ರಾಸಾಯನಿಕ ಸುರಿದು ಮೀನುಗಾರಿಕೆ? ಅಪರೂಪದ ಆಮೆಗಳ ಬೇಟೆ!

ಸಕಲೇಶಪುರದ ಹೇಮಾವತಿ ನದಿಯಲ್ಲಿ ರಾಸಾಯನಿಕ ಬಳಸಿ ಮೀನುಗಾರಿಕೆ ಮತ್ತು ಅಪರೂಪದ ಆಮೆಗಳ ಬೇಟೆ ಆರೋಪ ಕೇಳಿಬಂದಿದ್ದು, ಗ್ರಾಮಸ್ಥರು ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಕಲೇಶಪುರ | ಪ್ರದೀಪ್ ಬಾಳ್ಳುಪೇಟೆ

ತಾಲೂಕಿನ ಹಾನುಬಾಳು ಹೋಬಳಿಯ ಮಾವಿನಹಳ್ಳಿ ಸಮೀಪ Hemavathi  ಹೇಮಾವತಿ ನದಿಯಲ್ಲಿ ಅಪರಿಚಿತರ ತಂಡ ರಾಸಾಯನಿಕಗಳನ್ನು ಬಳಸಿ ಅಕ್ರಮ ಮೀನು ಬೇಟೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ಘಟನೆ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗಂಭೀರ ಆತಂಕಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಈಗಾಗಲೇ ನೀರಿನ ಮಟ್ಟ ಕಡಿಮೆಯಾಗಿರುವ ನದಿಯಲ್ಲಿ ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ನೀರು ಕಲುಷಿತವಾಗುತ್ತಿದ್ದು, ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನಿಂದ ಅಪಾಯದ ಸಾಧ್ಯತೆಗಳಿವೆ. ಸ್ಥಳೀಯರು ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ನದಿಯಲ್ಲಿ ಕಂಡುಬರುವ ಅಪರೂಪದ ಆಮೆಗಳ ಬೇಟೆ ಕೂಡ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇದು ಪರಿಸರ ಸಮತೋಲನಕ್ಕೆ ದೊಡ್ಡ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಪರಿಸರ ಪ್ರೇಮಿಗಳು ಎಚ್ಚರಿಸಿದ್ದಾರೆ.

ಗ್ರಾಮಸ್ಥರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.