ಡಿಸಿ ಲತಾ ಕುಮಾರಿ ಅವರಿಗೆ ಸಿಎಂ ಸರ್ಟಿಫಿಕೇಟ್ ಕೊಟ್ಟ ಮೇಲೆ ಯಾವ ತನಿಖೆ ಮಾಡುತ್ತಾರೆ? ಎಂದು ಪ್ರಶ್ನೆ; ಸಚಿವ ಶಿವಲಿಂಗೇಗೌಡ ವಿರುದ್ಧವೂ ರೇವಣ್ಣ ವಾಗ್ದಾಳಿ
ಹಾಸನ,ನ ,13,2026 (kannadapost.com): ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪದ ವಿಚಾರವಾಗಿ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಪ್ರತಿಕ್ರಿಯಿಸಿದ್ದು, “ನಾವೇನು ಆರೋಪ ಮಾಡಿಲ್ಲ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಯಾರೋ ಮಾಹಿತಿ ನೀಡಿದ್ದಾರೆ. ಅದನ್ನು ಅವರು ಹೇಳಿದ್ದಾರೆ ಅಷ್ಟೇ” ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಎತ್ತಿದರು.
‘ಸಚಿವ ಶಿವಲಿಂಗೇಗೌಡರ ಬಗ್ಗೆ ಮಾತನಾಡೋಣ’
ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ವಿರುದ್ಧದ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ, “ಶಿವಲಿಂಗಣ್ಣನ ವಿಚಾರ ಯಾಕೆ ಈಗ ಮಾತನಾಡುತ್ತೀಯಾ? ಅವರು ಹಾಸನಾಂಬೆ ದೇವಿಯ ಮೇಲೆಯೇ ಆಣೆ ಮಾಡುತ್ತಾರೆ. ಅವರ ಬಗ್ಗೆಯೂ ಮಾತನಾಡಲು ಸಮಯ ಬರುತ್ತದೆ. ಪಾಪ, ಅವರು ಈಗ ಮಂತ್ರಿಯಾಗಿದ್ದಾರೆ. ಈಗಲೇ ಯಾಕೆ ಮಾತನಾಡಲಿ?” ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಎಫ್ಎಸ್ಎಲ್ ವರದಿ ವಿಚಾರ ಪ್ರಸ್ತಾಪಿಸಿದ ಅವರು, ವರದಿಯನ್ನು ಹೇಗೆ ಪಡೆಯುತ್ತಾರೆ, ಮುಂದೇನು ಮಾಡುತ್ತಾರೆ ಎಂಬುದನ್ನು ಮುಂದೆ ತಿಳಿಸುವುದಾಗಿ ಹೇಳಿದರು.
‘ಡಿಸಿಗೆ ಸಿಎಂ ಸರ್ಟಿಫಿಕೇಟ್ ಕೊಟ್ಟಿದ್ದಾರೆ’
ಜಿಲ್ಲಾಧಿಕಾರಿ ಲತಾ ಕುಮಾರಿ ಅವರ ಕಾರ್ಯವೈಖರಿ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಮೆಚ್ಚುಗೆಯನ್ನು ರೇವಣ್ಣ ಪ್ರಶ್ನಿಸಿದರು.
“ಹಾಸನದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಡಿಸಿ ಲತಾ ಕುಮಾರಿ ಅವರಿಗೆ ಸಿಎಂ ಅವರೇ ಸರ್ಟಿಫಿಕೇಟ್ ಕೊಟ್ಟ ಮೇಲೆ ಯಾವ ತನಿಖೆ ನಡೆಯುತ್ತದೆ? ಹತ್ತು ರೂಪಾಯಿ ತಿಂದರೂ ಐದು ನಿಮಿಷದಲ್ಲಿ ನನಗೆ ಫೋನ್ ಮಾಡಬೇಕು ಎಂದು ಹೇಳಿದ್ದವರು ಈಗ ಅವರೇ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ” ಎಂದು ಟೀಕಿಸಿದರು.
‘ನಾವೇನು ಆರೋಪ ಮಾಡಿಲ್ಲ, ಕುಮಾರಸ್ವಾಮಿ ಹೇಳಿದ್ದು’
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪದ ಕುರಿತು ಮಾತನಾಡಿದ ರೇವಣ್ಣ, “ನಾವೇನು ಆರೋಪ ಮಾಡಿಲ್ಲ. ಕುಮಾರಸ್ವಾಮಿ ಅವರಿಗೆ ಯಾರೋ ಬಂದು ಮಾಹಿತಿ ನೀಡಿದ್ದಾರೆ. ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಅವರು ಯಾರ ಮೇಲೂ ಸ್ವತಃ ಆರೋಪ ಮಾಡಲು ಹೋಗಿಲ್ಲ” ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವಿರುದ್ಧದ ಆರೋಪಗಳ ಕುರಿತು ಜೆಡಿಎಸ್ ನಿಯೋಗ ಈಗಾಗಲೇ ದೂರು ಸಲ್ಲಿಸಿದ್ದು, ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ರೇವಣ್ಣ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
‘ಹಾಸನದ ಏಳು ಕ್ಷೇತ್ರಗಳನ್ನು ಗೆಲ್ಲಲು ಡಿಸಿಯನ್ನು ಇಲ್ಲೇ ಇಟ್ಟುಕೊಳ್ಳಿ’
ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಕಾಂಗ್ರೆಸ್ ಕಾರ್ಯತಂತ್ರದ ಕುರಿತು ವ್ಯಂಗ್ಯವಾಡಿದ ರೇವಣ್ಣ, “ಇವರು ಇಲ್ಲೇ ಇರಬೇಕು, ನಾವು ಏಳು ಸೀಟು ಗೆಲ್ಲಬೇಕು ಅಂತಿದ್ದಾರೆ. ಏಳು ಕ್ಷೇತ್ರಗಳನ್ನು ಗೆಲ್ಲಲು ಹಾಸನ ಡಿಸಿಯನ್ನು ಇದೇ ಕ್ಷೇತ್ರದಲ್ಲಿ ಇಟ್ಟುಕೊಳ್ಳಲೇಬೇಕು. ಡಿಸಿಯೂ ಇರಲಿ, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೂ ಇರಲಿ. ಆಮೇಲೆ ನೋಡೋಣ” ಎಂದು ಟಾಂಗ್ ನೀಡಿದರು.
ಕಳೆದ ಬಾರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಹಾಸನಕ್ಕೆ ಬಂದು ಅರಸೀಕೆರೆ ಕ್ಷೇತ್ರವನ್ನು ಗೆಲ್ಲಿಸಲು ಹಗಲು-ರಾತ್ರಿ ಶ್ರಮಿಸಿದ್ದರು ಎಂದು ಹೇಳುವ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ಜಿಲ್ಲಾಧಿಕಾರಿ ವಿರುದ್ಧದ ಆರೋಪಗಳು, ಸಚಿವ ಶಿವಲಿಂಗೇಗೌಡ ಅವರ ಕುರಿತ ಹೇಳಿಕೆಗಳು ಹಾಗೂ ಕಾಂಗ್ರೆಸ್ನ ರಾಜಕೀಯ ಕಾರ್ಯತಂತ್ರದ ಬಗ್ಗೆ ರೇವಣ್ಣ ನೀಡಿರುವ ಈ ಪ್ರತಿಕ್ರಿಯೆ ಹಾಸನ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.












