-0.1 C
Munich
Home News ಬೆಂಗಳೂರು: ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹ*ತ್ಯೆ; ಬ್ಯಾಂಕ್ ಮುಂಭಾಗದಲ್ಲೇ ಮಾರಕಾಸ್ತ್ರಗಳಿಂದ ದಾಳಿ!

ಬೆಂಗಳೂರು: ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹ*ತ್ಯೆ; ಬ್ಯಾಂಕ್ ಮುಂಭಾಗದಲ್ಲೇ ಮಾರಕಾಸ್ತ್ರಗಳಿಂದ ದಾಳಿ!

ಯಲಹಂಕ ನ್ಯೂಟೌನ್‌ನಲ್ಲಿ ಹಾಡಹಗಲೇ ಭೀಕರ ಕೃತ್ಯ; ಐದಾರು ಮಂದಿ ಯುವಕರ ಗ್ಯಾಂಗ್‌ನಿಂದ ಕೃತ್ಯ ಶಂಕೆ, ಭೂವ್ಯವಹಾರದ ವೈಷಮ್ಯವೇ ಹತ್ಯೆಗೆ ಕಾರಣವೇ?

ಬೆಂಗಳೂರು,ನ,13,2026 (kannadapost.com): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಮತ್ತೊಂದು ಭೀಕರ ಕೊಲೆ ನಡೆದಿದೆ. ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಲಹಂಕ ನ್ಯೂಟೌನ್‌ನಲ್ಲಿ ನಡೆದಿದೆ.

ರಾಮನಗರ ಮೂಲದ 39 ವರ್ಷದ ಚರಣ್ ಗೌಡ ಹತ್ಯೆಯಾದ ಉದ್ಯಮಿ. ನಗರದ ಯಲಹಂಕ ನ್ಯೂಟೌನ್‌ನ ಖಾಸಗಿ ಕಾಲೇಜಿನ ಸಮೀಪ, ಬ್ಯಾಂಕ್ ಮುಂಭಾಗದಲ್ಲೇ ಈ ಕೃತ್ಯ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಪತ್ನಿಯ ಎದುರೇ ಮಾರಕಾಸ್ತ್ರಗಳಿಂದ ದಾಳಿ

ಚರಣ್ ಗೌಡ ಅವರು ಪತ್ನಿಯೊಂದಿಗೆ ಇದ್ದ ಸಂದರ್ಭದಲ್ಲಿ ಐದಾರು ಮಂದಿಯ ಗುಂಪೊಂದು ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ಹಂತಕರು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಣ್ಣೆದುರೇ ಪತಿ ಹತ್ಯೆಯಾಗಿದ್ದನ್ನು ಕಂಡು ಪತ್ನಿ ಆಘಾತಕ್ಕೊಳಗಾಗಿ ಕುಸಿದುಬಿದ್ದಿದ್ದಾರೆ. ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಭೂವ್ಯವಹಾರದ ವೈಷಮ್ಯವೇ ಹತ್ಯೆಗೆ ಕಾರಣವೇ?

ರಾಮನಗರ ಮೂಲದ ಚರಣ್ ಗೌಡ ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನು ಮತ್ತು ನಿವೇಶನಗಳ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.

ಬ್ಯಾಂಕ್ ಕಟ್ಟಡದ ಮೇಲಿನ ಮಹಡಿಯಲ್ಲಿ ಧಣಿ ಪ್ರಾಪರ್ಟೀಸ್ ಹೆಸರಿನ ಕಚೇರಿಯನ್ನೂ ಹೊಂದಿದ್ದರು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವರೊಂದಿಗೆ ವೈಷಮ್ಯ ಉಂಟಾಗಿದ್ದು, ಇದೇ ಕಾರಣಕ್ಕೆ ಸುಪಾರಿ ನೀಡಿ ಹತ್ಯೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಹತ್ಯೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಸಿಸಿಟಿವಿ ಪರಿಶೀಲನೆ; ಆರೋಪಿಗಳಿಗಾಗಿ ಪೊಲೀಸರ ಬಲೆ

ಘಟನೆ ತಿಳಿಯುತ್ತಿದ್ದಂತೆ ಯಲಹಂಕ ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಬ್ಯಾಂಕ್ ಹಾಗೂ ಸುತ್ತಮುತ್ತಲಿನ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮೃತರ ಪತ್ನಿಯಿಂದಲೂ ಘಟನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದಾರೆ.

ಸುಮಾರು ಐದಾರು ಮಂದಿ ಯುವಕರ ತಂಡ ಕೃತ್ಯ ಎಸಗಿದ್ದು, ದಾಳಿ ನಡೆಸಿದ ಕೆಲವೇ ಕ್ಷಣಗಳಲ್ಲಿ ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಹಾಡಹಗಲೇ ನಡೆದ ಈ ಹತ್ಯೆ ಪ್ರಕರಣ ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದು, ಕೊಲೆಯ ಹಿಂದಿನ ನೈಜ ಕಾರಣ ಹಾಗೂ ಆರೋಪಿಗಳ ಪತ್ತೆಗಾಗಿ ಪೊಲೀಸ್ ತನಿಖೆ ಮುಂದುವರಿದಿದೆ.

error: Content is protected !!