ಹಾಸನ: ಬಿಎಸ್‌ಎಫ್ ಯೋಧ ಕುಮಾರಸ್ವಾಮಿ ಚಂಡೀಗಢದಲ್ಲಿ ನಿಧನ; ನಾಳೆ ಬೆಳಗ್ಗೆ ಜಿಲ್ಲಾಡಳಿತದಿಂದ ಅಂತಿಮ ನಮನ

ಹಾಸನ(kannadapost.com): ಗಡಿಭದ್ರತಾ ಪಡೆಯ (BSF) 99ನೇ ಬೆಟಾಲಿಯನ್ ಯೋಧರಾಗಿ ದೇಶ ಸೇವೆ ಸಲ್ಲಿಸುತ್ತಿದ್ದ ಹಾಸನದ ಹೆಮ್ಮೆಯ ಪುತ್ರ, ಕಾನ್ಸ್‌ಟೇಬಲ್ ಕುಮಾರಸ್ವಾಮಿ (24 ವರ್ಷಗಳ ಸುದೀರ್ಘ ಸೇವೆ) ಅವರು ಅನಾರೋಗ್ಯದಿಂದ ಚಂಡೀಗಢದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಯಕೃತ್ ಹಾನಿಯಿಂದ (Liver damage) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ.

​ಯೋಧರ ಪಾರ್ಥಿವ ಶರೀರವನ್ನು ವಿಮಾನದ ಮೂಲಕ ಚಂಡೀಗಢದಿಂದ ಬೆಂಗಳೂರಿಗೆ ತರಲಾಗುತ್ತಿದ್ದು, ರಾತ್ರಿ 9:30 ರ ಸುಮಾರಿಗೆ ವಿಮಾನ ಹೊರಡಲಿದೆ. ನಾಳೆ (ಶುಕ್ರವಾರ) ಬೆಳಿಗ್ಗೆ ವೇಳೆಗೆ ಪಾರ್ಥಿವ ಶರೀರವು ಬೆಂಗಳೂರು ತಲುಪಿ, ಅಲ್ಲಿಂದ ಹಾಸನಕ್ಕೆ ಆಗಮಿಸಲಿದೆ.

​ಜಿಲ್ಲಾಡಳಿತದಿಂದ ಗೌರವ ನಮನ:

ಮೃತ ಯೋಧರ ಅಂತಿಮ ದರ್ಶನ ಹಾಗೂ ಗೌರವ ನಮನಕ್ಕಾಗಿ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳೆ (ಶುಕ್ರವಾರ) ಬೆಳಿಗ್ಗೆ 8:30 ಗಂಟೆಗೆ ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು. ಈ ವೇಳೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ವೀರ ಯೋಧನಿಗೆ ಅಧಿಕೃತ ಗೌರವ ನಮನ (Guard of Honour) ಸಲ್ಲಿಸಲಾಗುವುದು.

​ವಿಜಯನಗರ, ಹಾಸನ ನಿವಾಸಿಯಾಗಿರುವ ಕುಮಾರಸ್ವಾಮಿ ಅವರ ಅಕಾಲಿಕ ನಿಧನಕ್ಕೆ ಕುಟುಂಬವರ್ಗ, ಬಿಎಸ್‌ಎಫ್ ಸಹೋದ್ಯೋಗಿಗಳು  ಕಂಬನಿ ಮಿಡಿದಿದ್ದಾರೆ.