5.9 C
Munich
Home Culture ಹಾಸನ: ವರ್ಷದ ನಂತರ ದರ್ಶನ ಕರುಣಿಸಿದ ಹಾಸನಾಂಬೆ: ಭಕ್ತರ ಜಯಘೋಷದ ನಡುವೆ ಗರ್ಭಗುಡಿ ಬಾಗಿಲು ಓಪನ್!

ಹಾಸನ: ವರ್ಷದ ನಂತರ ದರ್ಶನ ಕರುಣಿಸಿದ ಹಾಸನಾಂಬೆ: ಭಕ್ತರ ಜಯಘೋಷದ ನಡುವೆ ಗರ್ಭಗುಡಿ ಬಾಗಿಲು ಓಪನ್!

ಹಾಸನ,ಅಕ್ಟೋಬರ್‌,29 (kannadapost.com):ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಗುರುವಾರ ಮಧ್ಯಾಹ್ನ 12:28ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ‘ಹಾಸನಾಂಬೆಗೆ ಜೈ… ತಾಯಿಗೆ ಉಘೇ ಉಘೇ…’ ಎಂಬ ಭಕ್ತರ ಭಕ್ತಿಪೂರ್ವಕ ಜಯಘೋಷಗಳ ನಡುವೆ ದೇವಿಯ ದರ್ಶನೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

​ಅರಸು ವಂಶಸ್ಥರಿಂದ ಸಾಂಪ್ರದಾಯಿಕ ಪೂಜೆ:

ಪೂರ್ವ ಸಂಪ್ರದಾಯದಂತೆ ತಳವಾರ ವಂಶಸ್ಥರಾದ ನಂಜರಾಜು ಅವರು ವಿಶೇಷ ಪೂಜೆ ಸಲ್ಲಿಸಿ, ವಂಶಪಾರಂಪರ್ಯವಾಗಿ ಬಂದಿರುವ ಪವಿತ್ರ ಖಡ್ಗದಿಂದ ಗೊನೆಕಟ್ಟಿದ್ದ ಬಾಳೆ ಕಂಬವನ್ನು ಕಡಿಯುವ ಮೂಲಕ ಆಚರಣೆ ನೆರವೇರಿಸಿದರು. ಬಾಳೆ ಕಂಬ ಕಡಿಯುತ್ತಿದ್ದಂತೆಯೇ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು. ಬಾಗಿಲು ತೆರೆದ ಮೊದಲ ದಿನದಂದು ಯಾವುದೇ ಆಭರಣ ಹಾಗೂ ವಸ್ತ್ರಾಲಂಕಾರಗಳಿಲ್ಲದ ದೇವಿಯ ‘ವಿಶ್ವರೂಪ ದರ್ಶನ’ ಪಡೆದ ಮಠಾಧೀಶರು, ಗಣ್ಯರು ಹಾಗೂ ಜನಪ್ರತಿನಿಧಿಗಳು ಪುನೀತಭಾವ ಅನುಭವಿಸಿದರು.

​ಗಣ್ಯರ ಉಪಸ್ಥಿತಿ:

ಈ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷಣಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾಕ್ಷಿಯಾದರು.

​ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭನ್ವಿತಾ, ಜಿ.ಪಂ ಸಿಇಒ ಶುಭಂ ಶುಕ್ಲಾ, ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

​ನ. 10ರವರೆಗೆ ನಿರಂತರ ದರ್ಶನ:

ನಾಳೆಯಿಂದ ನವೆಂಬರ್ 10 ರವರೆಗೆ ನೈವೇದ್ಯ,ಪೂಜಾ ಸಮಯ ಹೊರತುಪಡಿಸಿ ದಿನದ 24 ಗಂಟೆಯೂ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ (ಮೊದಲ ಮತ್ತು ಕೊನೆಯ ದಿನ ಹೊರತುಪಡಿಸಿ). ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರ ಪ್ರವಾಹವೇ ಹರಿದುಬರುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಸುಗಮ ದರ್ಶನಕ್ಕಾಗಿ ಸಕಲ ಸಿದ್ಧತೆ ಕೈಗೊಂಡಿದೆ.

error: Content is protected !!