ಹಾಸನಾಂಬ ದೇವಾಲಯ ಗರ್ಭಗುಡಿ ಬಾಗಿಲು ತೆರೆಯಲು ಕ್ಷಣಗಣನೆ: ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ಭಾಗ್ಯ!

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿ ಇಂದು ಮಧ್ಯಾಹ್ನ 12 ಗಂಟೆ ನಂತರ ತೆರೆಯಲಿದೆ. ಅ.30 ರಿಂದ ನ.10 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹಾಸನ (kannadapost.com): ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಇಂದಿನಿಂದ (ಅ.29) ನ.11 ರವರೆಗೆ ನಡೆಯಲಿದ್ದು, ಇಂದು ಮಧ್ಯಾಹ್ನ 12 ಗಂಟೆ ನಂತರ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ.

​ಸಂಪ್ರದಾಯದಂತೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆಕಂಬ ಕಡಿದ ಬಳಿಕ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಮುಜರಾಯಿ ಖಾತೆ ಸಚಿವ ಬಸಂತಪ್ಪ, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಸ್ಪಿ ಶುಭಾನ್ವಿತಾ ಹಾಗೂ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ.

​ನಾಳೆಯಿಂದ ಸಾರ್ವಜನಿಕ ದರ್ಶನ:

ಗರ್ಭಗುಡಿ ಬಾಗಿಲು ತೆರೆಯುವ ಮೊದಲ ದಿನವಾದ ಇಂದು ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ. ನಾಳೆ (ಅ.30) ಬೆಳಿಗ್ಗೆ 6 ಗಂಟೆಯಿಂದ ನ.10 ರವರೆಗೆ ಭಕ್ತರಿಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ದೇವಾಲಯವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದು, ಜಾತ್ರಾ ಮಹೋತ್ಸವದ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ.

​ದರ್ಶನ ವ್ಯವಸ್ಥೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್:

ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತವು ಧರ್ಮ ದರ್ಶನದ ಜೊತೆಗೆ 1,000 ರೂ. ಹಾಗೂ 300 ರೂ. ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್ ವ್ಯವಸ್ಥೆ ಮಾಡಿದೆ. ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಉಚಿತ ದೊನ್ನೆ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಧರ್ಮ ದರ್ಶನದ ಸಾಲಿನಲ್ಲಿ ನೂಕುನುಗ್ಗಲು ಉಂಟಾಗದಂತೆ ಹಾಗೂ ಭದ್ರತೆಯ ದೃಷ್ಟಿಯಿಂದ ದೇವಾಲಯದ ಸುತ್ತಮುತ್ತ ಸಿಸಿಟಿವಿ ಕಣ್ಗಾವಲು ಹಾಕಲಾಗಿದ್ದು, ಮೂರು ಪಾಳಿಯಲ್ಲಿ 2,000ಕ್ಕೂ ಅಧಿಕ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

​ವಿವಿಧ ಕ್ರೀಡಾಕೂಟ ಹಾಗೂ ಪ್ರದರ್ಶನ ಆಯೋಜನೆ:

ಜಾತ್ರಾ ಮಹೋತ್ಸವದ ಅಂಗವಾಗಿ ನಗರಸಭೆ ವಸ್ತು ಪ್ರದರ್ಶನ ಆವರಣದಲ್ಲಿ ಕುಸ್ತಿ, ವಾಲಿಬಾಲ್, ಕಬಡ್ಡಿ ಪಂದ್ಯಾವಳಿ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜೊತೆಗೆ ಹಳ್ಳಿಕಾರ್ ಮತ್ತು ಅಮೃತ್‌ಮಹಲ್ ತಳಿಯ ಜಾನುವಾರುಗಳ ಪ್ರದರ್ಶನ ಹಾಗೂ ಶ್ವಾನ, ಬೆಕ್ಕು ಮತ್ತು ಟಗರುಗಳ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.