ಹಾಸನ: ಜ.‌ 24ರ ಜೆಡಿಎಸ್ ಸಮಾವೇಶ ವೇದಿಕೆ ಸಿದ್ಧತೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪರಿಶೀಲಿಸಿದರು

ಹಾಸನ: ಜ. 24 ರಂದು ಹಾಸನದಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಸಮಾವೇಶ ಸ್ಥಳವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪರಿಶೀಲಿಸಿದರು. ವಾಸ್ತು ಶಾಸ್ತ್ರಕ್ಕೆ ಮಹತ್ವ ನೀಡಿದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅವರ ಸಹೋದರ ಎಚ್.ಡಿ.ರೇವಣ್ಣ ಅವರು ವಾಸ್ತು ಪ್ರಕಾರವೇ ವೇದಿಕೆಯತ್ತ ಕರೆದುಕೊಂಡು ಬಂದರು.

ಮೊದಲಿಗೆ ಕಾರು ದಕ್ಷಿಣ ದಿಕ್ಕಿನಿಂದ ವೇದಿಕೆ ಬಳಿಗೆ ಬಂದಿದ್ದು, ಇಳಿಯಲು ಸಿದ್ಧರಾಗಿದ್ದ ಸಂದರ್ಭದಲ್ಲಿ ಕಾರಿನಿಂದ ಇಳಿಯದಂತೆ ಚಾಲಕನಿಗೆ ಸೂಚಿಸಿದ ಎಚ್.ಡಿ.ರೇವಣ್ಣ ಅವರು, ವಾಹನವನ್ನು ಮುಂದಕ್ಕೆ ಸಾಗಿಸಲು ಹೇಳಿದರು. ನಂತರ ಕಾರು ಉತ್ತರ ದಿಕ್ಕಿಗೆ ತೆರಳಿ, ಈಶಾನ್ಯ ಮೂಲೆಯಿಂದ ತಿರುಗಿ ಪೂರ್ವ ದಿಕ್ಕಿಗೆ ಬಂದು ನಿಲ್ಲಿಸಲಾಯಿತು. ಪೂರ್ವಾಭಿಮುಖವಾಗಿ ಕಾರು ನಿಂತ ಬಳಿಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಾಹನದಿಂದ ಇಳಿದು ವೇದಿಕೆಯತ್ತ ನಡೆದುಹೋದರು.

ಈ ಸಂದರ್ಭ ಕಾರಿನಲ್ಲೇ ಕೇಂದ್ರ ಸಚಿವರೊಂದಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಹಾಗೂ ಎಂಎಲ್‌ಸಿ ಎಸ್.ಎಲ್.ಬೋಜೇಗೌಡ ಅವರು ಆಗಮಿಸಿದ್ದರು.