ಹಾಸನ: ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿ ವತಿಯಿಂದ ಅಪರಾಧ ಸುದ್ದಿ-ಪರಿಣಾಮಗಳು, ಸ್ಟಡೀ ವಿತ್ ಸೊಸೈಟಿ ಹೆಸರಿನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ ಅವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಮ್ಮಯ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಸ್ತಂಭ ಎನಿಸಿರುವ ಮಾಧ್ಯಮ ರಂಗಕ್ಕೆ ಸಂವಿಧಾನದಲ್ಲೇ ರಕ್ಷಣೆ ಇದೆ. ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿಗೆ ಸ್ವಾತಂತ್ರ್ಯ ಇದೆ. ಇದರ ಉದ್ದೇಶ ಅಧಿಕಾರದಲ್ಲಿರುವವರನ್ನು ಸದಾ ಎಚ್ಚರಿಸುವುದು, ಅವರು ಲೋಪ-ದೋಷ ಪ್ರಶ್ನೆ ಮಾಡುವುದಾಗಿದೆ ಎಂದರು.
ಆದರೆ ಬೇರೆ ಕಡೆಗಳಲ್ಲಿ ಈ ರೀತಿ ಇಲ್ಲ, ನಮ್ಮ ದೇಶದಲ್ಲಿ ಮಾಧ್ಯಮದವರೇ ತನಿಖಾ ವರದಿ ಮಾಡಬಹುದು, ಅದನ್ನು ಪ್ರಕಟ ಮಾಡಿ, ಹಂಚಿಕೆ ಮಾಡಲೂ ಬಹುದು ಎಂದು ಹೇಳಿದರು. ಇದನ್ನು ಮಾಡಲು ಮಾಧ್ಯಮದವರಿಗೆ ಭಯ ಇರಬಾರದು, ಭಯ ಇದ್ದರೆ ಏನೂ ಮಾಡಲು ಆಗುವುದಿಲ್ಲ ಎಂದ ಅವರು, ಇತ್ತೀಚಿನ ದಿನ ಮಾನಗಳಲ್ಲಿ ಒಂದಲ್ಲ, ಒಂದು ಮಾಧ್ಯಮಗಳು ಉಳ್ಳವರ ನಿಯಂತ್ರಣದಲ್ಲಿವೆ.
ಅಂದರೆ ಮಾಧ್ಯಮಗಳನ್ನೂ ನಿಯಂತ್ರಣ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ರಾಜಕೀಯ ಒತ್ತಡ ಇದೆ. ಆರ್ಥಿಕ ಸ್ಥಿತಿಗತಿ ಸದೃಢವಾಗಿಲ್ಲ ಜೊತೆಗೆ ಭಯದ ವಾತಾವರಣವೂ ಹೆಚ್ಚಾಗುತ್ತಿದೆ ಎಂದರು. ಸಮಾಜದಲ್ಲಿ ಮೀಡಿಯಾ ವಿಚಾರಣೆ ಒಳ್ಳೆಯದಲ್ಲ, ಸಂದರ್ಶನ ಮಾಡುವಾಗ ಹುಷಾರು, ಯಾವುದೇ ಸಂದರ್ಭದಲ್ಲೂ ಜನರ ಭಾವನೆಗಳನ್ನು
ಮಿಸ್ ಗೈಡ್ ಮಾಡಬಾರದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಂಶೋಧನಾತ್ಮಕ ವರದಿಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಸಲಹೆ ನೀಡಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭವ್ಯಾ ನವೀನ್ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿರುವ ಪ್ರತಿಕೋದ್ಯಮದ ಮೂಲ ಆಶಯವೇ ಸಮಾಜ ಮತ್ತು ಕಲಿಕೆ ಆಗಿದೆ.
ಆದರೆ ಆರಂಭದ ಪತ್ರಿಕೋದ್ಯಮ, ಹಾಲಿ ಕಲಿಯುತ್ತಿರುವ, ಪತ್ರಿಕೋದ್ಯಮ ಕಲಿಸುತ್ತಿರುವ/ಅಸ್ತಿತ್ವದಲ್ಲಿರುವ ಪತ್ರಿಕೋದ್ಯಮ ವ್ಯತಿರಿಕ್ತವಾಗಿದೆ. ನನ್ನ ಪ್ರಕಾರ ಮೂರು ಕಾಲಘಟ್ಟದ ಪತ್ರಿಕೋದ್ಯಮದ ಆಶಯಗಳು ಒಂದೇ ಆದರೆ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಅನುಕೂಲ ಆಗಲಿದೆ. ಪತ್ರಿಕೋದ್ಯಮ ಪ್ರಾಯೋಗಿಕ ಕಲಿಕೆಗೆ ಪೂರಕ ಆಗಿರಲಿ ಎಂದು ಆಶಿಸಿದರು.
ಇಡೀ ಕರ್ನಾಟದಲ್ಲಿ ಹೆಚ್ಚು ಪತ್ರಿಕೋದ್ಯಮ ಕಲಿಸುವ ಕಾಲೇಜು ಇರುವುದು ಹಾಸನದಲ್ಲಿ. ಹಾಗೆಯೇ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ರಾಜ್ಯದಲ್ಲೇ ಗಟ್ಟಿಯಾದ ಸಂಘ ಮತ್ತು ಹಿರಿಯ ಪತ್ರಕರ್ತರಿರುವುದು ಹಾಸನದಲ್ಲೇ. ಈ ಎಲ್ಲರಿಂದ ಭವಿಷ್ಯದಲ್ಲಿ ಜಿಲ್ಲೆಯಿಂದ ಉತ್ತಮ ಪತ್ರಕರ್ತರು ಹೊರ ಬರುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಅವರು, ಎಎಸ್ಪಿ ತಮ್ಮಯ್ಯ ಅವರು ಅಪರಾಧ ಪ್ರಕರಣಗಳ ವರದಿಗಾರಿಕೆ, ಮುನ್ನೆಚ್ಚರಿಕೆ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊAಡಿದ್ದಾರೆ ಎಂದರು.
ವಿಶ್ವದಲ್ಲಿ ಭಾರತ ಪತ್ರಿಕೋದ್ಯಮದಲ್ಲಿ 159ನೇ ಸ್ಥಾನದಲ್ಲಿದೆ. ಇದಕ್ಕೆ ಮಾಧ್ಯಮ ಬಂಡವಾಳ ಶಾಹಿಗಳ ಹಿಡಿತ, ರಾಜಕೀಯ ವ್ಯವಸ್ಥೆ, ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ಇದಕ್ಕೆ ಕಾರಣ ಎಂದರು. ನಾವೆಲ್ಲರೂ ವೃತ್ತಿ ಬದ್ಧತೆಯಿಂದ ಕೆಲಸ ಮಾಡೋಣ, ಮಕ್ಕಳು ಸಾಕಷ್ಟು ಕನಸು ಹೊತ್ತು ಈ ಕ್ಷೇತ್ರಕ್ಕೆ ಬಂದಿರುತ್ತೀರಿ, ಕ್ರೀಯಾತ್ಮಕವಾಗಿ ಕೆಲಸ ಮಾಡಿ, ಅದಕ್ಕೆ ತಕ್ಕುದಾದ ಸಂಭಾವನೆ, ಗೌರವ ಇದೆ. ಸೈದ್ಧಾಂತಿಕ ನಿಯಮ ಸ್ಪಷ್ಟವಾಗಿರಲಿ ಎಂದರು.
ಸಾಂಸ್ಕೃತಿಕ ಸಮಿತಿಯ ಪ್ರಸನ್ನ ಕುಮಾರ್(ಚಲಂ) ಸ್ಟಡೀ ವಿತ್ ಸೊಸೈಟಿ, ಕಲಿಕೆಯ ಒಂದು ತಾಣ, ಈ ಕಾಲಘಟ್ಟದಲ್ಲಿ ನಾವು ನಿತ್ಯ ಕಲಿಯಬೇಕಿದೆ ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಎಂ.ಹರೀಶ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಎನ್.ನಂಜುAಡೇಗೌಡ, ಜಿ.ಪ್ರಕಾಶ್, ಸಾಂಸ್ಕೃತಿಕ ಸಮಿತಿಯ ಸದಸ್ಯರು ಇದ್ದರು. ಚೈತ್ರಾ ಮಹಾಲಿಂಗು ನಿರೂಪಿಸಿದರು. ಮಲ್ಲಿಕಾರ್ಜುನ್ ಕೊಚ್ಚರಗಿ ಸ್ವಾಗತಿಸಿದರು. ಕಡೆಯಲ್ಲಿ ತಮ್ಮಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮಾಧ್ಯಮಗಳಿಗೆ ಎಂತಹ ಶಕ್ತಿ ಇದೆ ಎಂಬುದನ್ನು ಜೆಸಿಕಾ ಲಾಲ್ ಕೊಲೆ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಿದ್ದು ಕಣ್ಣ ಮುಂದಿನ ಉದಾಹರಣೆ. ದೆಹಲಿಯ ನಿರ್ಭಯಾ ಕೇಸಲ್ಲೂ ಮಾಧ್ಯಮಗಳು ದಿಟ್ಟವಾಗಿ ನಿಂತ ಪರಿಣಾಮ, ಪೋಕ್ಸೋ ಇತ್ಯಾದಿ ಕಾನೂನಿನಲ್ಲೇ ಹಲವು ರೀತಿಯ ತಿದ್ದುಪಡಿ ತಂದು, ಬದಲಾವಣೆ ಮಾಡಲಾಯಿತು ಎಂದು ತಮ್ಮಯ್ಯ ಹೇಳಿದರು.










