19.2 C
Munich
Home News ಹಾಸನಾಂಬೆ ದರ್ಶನೋತ್ಸವ: ಭಿನ್ನಾಭಿಪ್ರಾಯ ಮರೆತು ಒಂದಾದ ಹಾಸನ ಡಿಸಿ-ಎಸ್ಪಿ; ಒಗ್ಗಟ್ಟಿನ ಸಂದೇಶ!

ಹಾಸನಾಂಬೆ ದರ್ಶನೋತ್ಸವ: ಭಿನ್ನಾಭಿಪ್ರಾಯ ಮರೆತು ಒಂದಾದ ಹಾಸನ ಡಿಸಿ-ಎಸ್ಪಿ; ಒಗ್ಗಟ್ಟಿನ ಸಂದೇಶ!

ಹಾಸನ, ಅಕ್ಟೋಬರ್‌,16,2026 (kannadapost.com): ಕಳೆದ ಕೆಲವು ದಿನಗಳಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಭಿನ್ನಾಭಿಪ್ರಾಯಕ್ಕೆ ಕೊನೆಗೂ ತೆರೆಬಿದ್ದಿದೆ. ಮುಂಬರುವ ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ (ಡಿಸಿ) ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ತಮ್ಮೊಳಗಿನ ಮುನಿಸು ಮರೆತು ಜೊತೆಯಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ.

ಸಿಎಸ್ ಸಂಧಾನ ಸಭೆಯ ಬಳಿಕ ಸುಖಾಂತ್ಯ

ಹಾಸನದ ಪೆಂಡಾಲ್ ಗಣಪತಿ ವಿಸರ್ಜನೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಯವರು ಎಸ್ಪಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಜೆಡಿಎಸ್ ಪ್ರತಿಭಟನೆ ನಡೆಸಿ, ಪ್ರಕರಣ ತೀವ್ರ ರಾಜಕೀಯ ಹಾಗೂ ಆಡಳಿತಾತ್ಮಕ ಸ್ವರೂಪ ಪಡೆದುಕೊಂಡಿತ್ತು. ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮುಖ್ಯ ಕಾರ್ಯದರ್ಶಿ (CS), ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರ ಸಮ್ಮುಖದಲ್ಲಿ ಉನ್ನತ ಮಟ್ಟದ ಸಂಧಾನ ಸಭೆ ನಡೆಸಿದ್ದರು. ಸಭೆಯಲ್ಲಿ ಇಬ್ಬರೂ ಅಧಿಕಾರಿಗಳಿಗೆ ಆಡಳಿತಾತ್ಮಕ ಸಮನ್ವಯತೆಯ ಪಾಠ ಮಾಡಲಾಗಿತ್ತು.

ದೇವಾಲಯದ ಬಳಿ ಹಸ್ತಲಾಘವ, ಆತ್ಮೀಯ ಆಲಿಂಗನ

ಮುಖ್ಯ ಕಾರ್ಯದರ್ಶಿಗಳ ಸಭೆಯ ಬೆನ್ನಲ್ಲೇ ಇಬ್ಬರೂ ಅಧಿಕಾರಿಗಳು ಒಟ್ಟಾಗಿ ಹಾಸನಾಂಬೆ ದೇವಾಲಯದ ಆವರಣಕ್ಕೆ ಆಗಮಿಸಿದರು. ದೇವಾಲಯದ ಸಮೀಪ ಬರುತ್ತಿದ್ದಂತೆ ಪರಸ್ಪರ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿಕೊಂಡರು. ಬಳಿಕ ಆತ್ಮೀಯ ಆಲಿಂಗನದ ಮೂಲಕ ನಾವಿಬ್ಬರೂ ಜೊತೆಯಾಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿದರು.

ಹಾಸನಾಂಬೆಗೆ ವಿಶೇಷ ಪೂಜೆ; ಸಿದ್ಧತೆಗಳ ಪರಿಶೀಲನೆ

ಇಬ್ಬರೂ ಅಧಿಕಾರಿಗಳು ಒಟ್ಟಾಗಿ ತೆರಳಿ ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕಲು ಎಸ್ಪಿ ಅವರು ಡಿಸಿಯವರಿಗೆ ಹಣ ನೀಡಿದ ದೃಶ್ಯ ಎಲ್ಲರ ಗಮನ ಸೆಳೆಯಿತು.

ಪೂಜೆಯ ನಂತರ, ಹಾಸನಾಂಬೆ ದರ್ಶನೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲ, ಸರತಿ ಸಾಲು ನಿರ್ವಹಣೆ ಹಾಗೂ ಭದ್ರತಾ ವ್ಯವಸ್ಥೆಗಳ ಕುರಿತು ಡಿಸಿಯವರು ಎಸ್ಪಿಗೆ ವಿವರಣೆ ನೀಡಿದರು. ಇಬ್ಬರೂ ಅಧಿಕಾರಿಗಳು ಜಂಟಿಯಾಗಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡು, ಯಾವುದೇ ಲೋಪವಿಲ್ಲದೆ ಈ ಬಾರಿಯ ಹಾಸನಾಂಬೆ ಉತ್ಸವವನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

error: Content is protected !!