Hassan|ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದರ ಟೈರ್ ದಿಢೀರ್ ಸ್ಪೋಟಗೊಂಡು, ಇಡೀ ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವ ಭೀಕರ ಘಟನೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ:
NL-01-B-3164 ನೋಂದಣಿ ಸಂಖ್ಯೆಯ ಈ ಖಾಸಗಿ ಬಸ್ ಮಂಗಳೂರಿನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತ್ತು. ಬಸ್‌ನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ಶಾಂತಿಗ್ರಾಮದ ಬಳಿ ಬರುತ್ತಿದ್ದಂತೆ, ಅತಿವೇಗದಲ್ಲಿದ್ದ ಬಸ್‌ನ ಟೈಯರ್ ಏಕಾಏಕಿ ಸ್ಪೋಟಗೊಂಡಿದೆ. ಟೈಯರ್ ಸ್ಪೋಟಗೊಳ್ಳುತ್ತಿದ್ದಂತೆಯೇ ಬಸ್‌ನಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ.

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ:
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕೂಡಲೇ ಎಚ್ಚೆತ್ತ ಚಾಲಕ ರಸ್ತೆಯ ಬದಿಯಲ್ಲಿ ಬಸ್ ನಿಲ್ಲಿಸಿದ್ದಾನೆ. ಬಸ್ ನಿಲ್ಲಿಸುತ್ತಿದ್ದಂತೆಯೇ ಒಳಗಿದ್ದ ಎಲ್ಲಾ ಪ್ರಯಾಣಿಕರು ತರಾತುರಿಯಲ್ಲಿ ಕೆಳಗಿಳಿದಿದ್ದಾರೆ. ಪ್ರಯಾಣಿಕರು ಬಸ್‌ನಿಂದ ಹೊರಬರುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ಇಡೀ ಬಸ್‌ಗೆ ಆವರಿಸಿಕೊಂಡಿದ್ದು, ಬಸ್ ಧಗಧಗಿಸಿ ಉರಿದಿದೆ.
ಸುಟ್ಟು ಕರಕಲಾದ ಲಗೇಜ್ ಮತ್ತು ಬಸ್:
ಪ್ರಾಣಾಪಾಯದಿಂದ ಪಾರಾದರಾದರೂ, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ಹಲವು ಪ್ರಯಾಣಿಕರು ತಮ್ಮ ಲಗೇಜ್ ಹಾಗೂ ಮೊಬೈಲ್‌ಗಳನ್ನು ಬಸ್‌ನಲ್ಲೇ ಬಿಟ್ಟು ಬಂದಿದ್ದರು. ಪರಿಣಾಮ ಪ್ರಯಾಣಿಕರ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ. ಇಡೀ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಅಷ್ಟರಲ್ಲಾಗಲೇ ಖಾಸಗಿ ಬಸ್ ಸಂಪೂರ್ಣ ಭಸ್ಮವಾಗಿತ್ತು. ಬಳಿಕ ನಡುರಸ್ತೆಯಲ್ಲಿ ನಿಂತಿದ್ದ ಎಲ್ಲಾ ಪ್ರಯಾಣಿಕರಿಗೆ ಬೇರೊಂದು ಬಸ್‌ನ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಯಿತು.

ಈ ಘಟನೆಯು ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿವೇಗವೇ ಟೈಯರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಳ್ಳಲು ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.










