Hassan|ಹಾಸನದಲ್ಲಿ ಇಂಧನ ಕೊರತೆ ಇಲ್ಲ-ಜನರು ಆತಂಕ ಪಡಬೇಡಿ: ಶ್ರೇಯಸ್ ಎಂ. ಪಟೇಲ್ ನೇತೃತ್ವದಲ್ಲಿ ಅಧಿಕಾರಿಗಳು-ಬಂಕ್ ಮಾಲೀಕರ ಸಭೆ

  • Hassan|ಹಾಸನ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ನೇತೃತ್ವದ ಸಭೆಯಲ್ಲಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ 3 ರಿಂದ 6 ದಿನಗಳ ಬಫರ್ ಸ್ಟಾಕ್ ಲಭ್ಯ.

Hassn|ಹಾಸನ: ಜಿಲ್ಲೆಯಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆ ಕುರಿತು ಮಂಗಳವಾರ ನಡೆದ ಮಹತ್ವದ ಸಭೆಯಲ್ಲಿ, ಹಾಸನ ಜಿಲ್ಲೆಯಲ್ಲಿ ಇಂಧನ ಕೊರತೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು, ವಿವಿಧ ತೈಲ ಕಂಪನಿಗಳ ಪ್ರತಿನಿಧಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ಭಾಗವಹಿಸಿದ್ದರು.

ಸಭೆಯಲ್ಲಿ ಜಿಲ್ಲೆಯಲ್ಲಿ ಮೇ 11ರ ತನಕ ಲಭ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್ ಸ್ಟಾಕ್ ಮಾಹಿತಿ ಹಂಚಿಕೊಳ್ಳಲಾಯಿತು. ಜಿಲ್ಲೆಯಲ್ಲಿ ಒಟ್ಟು 226 ಪೆಟ್ರೋಲ್ ಬಂಕ್‌ಗಳಿದ್ದು, ಸುಮಾರು 14.52 ಲಕ್ಷ ಲೀಟರ್ ಪೆಟ್ರೋಲ್ ಹಾಗೂ 18.80 ಲಕ್ಷ ಲೀಟರ್ ಡೀಸೆಲ್ ಸಂಗ್ರಹವಿದೆ ಎಂದು ತಿಳಿಸಲಾಯಿತು.

ತೈಲ ಕಂಪನಿಗಳ ಅಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷರು ಮಾತನಾಡಿ, ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ತಿಳಿಸಿದರು. ಆದರೆ ಹಿಂದಿನಂತೆ ಸಾಲದ ರೂಪದಲ್ಲಿ ಇಂಧನ ನೀಡುವ ವ್ಯವಸ್ಥೆ ಪ್ರಸ್ತುತ ಇಲ್ಲದಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಗ್ರಾಹಕರಿಗೆ ಬಾಟಲ್, ಕ್ಯಾನ್ ಹಾಗೂ ಬ್ಯಾರೆಲ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನೀಡಬಾರದು ಎಂದು ತೈಲ ಕಂಪನಿಗಳು ಸೂಚಿಸಿರುವುದಾಗಿ ಸಭೆಯಲ್ಲಿ ತಿಳಿಸಲಾಯಿತು. ಕೃಷಿ ಚಟುವಟಿಕೆಗಳ ಅಗತ್ಯಕ್ಕಾಗಿ ಮಾತ್ರ ನಿರ್ದಿಷ್ಟ ಪ್ರಮಾಣದಲ್ಲಿ ಇಂಧನ ನೀಡಲಾಗುತ್ತಿದೆ ಎಂದು ವಿವರಿಸಲಾಯಿತು.

ಪ್ರಸ್ತುತ ಜಿಲ್ಲೆಯಲ್ಲಿ 3ರಿಂದ 6 ದಿನಗಳವರೆಗೆ ಸಾಕಾಗುವಷ್ಟು ಬಫರ್ ಸ್ಟಾಕ್ ಲಭ್ಯವಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ಕುರಿತು ಸೂಕ್ತ ಪತ್ರಿಕಾ ಪ್ರಕಟಣೆ ನೀಡುವಂತೆ ಸಂಸದ ಶ್ರೇಯಸ್ ಎಂ. ಪಟೇಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.