ಹಾಸನ: ಸ್ಕಾಲರ್ಸ್ ಶಾಲೆಯಲ್ಲಿ ಕಲಾವಿದೆ ಪೂಜಾ ರಘುನಂದನ್- ರಂಗಭೂಮಿ ಅರಿವು ಕಾರ್ಯಕ್ರಮ

 ಹಾಸನ: ಫೆಬ್ರವರಿ 9, ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹೊಯ್ಸಳಪತ ಪತ್ರಿಕೆ ಹಾಗೂ ರಂಗಭೂಮಿ ಕಲಾವಿದರಾದ ಪೂಜಾ ರಘುನಂದನ್ ಅವರ ಸಹಯೋಗದಲ್ಲಿ ಮಕ್ಕಳ ರಂಗಭೂಮಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮವು ಶಾಲಾ ಆಡಳಿತ ಮಂಡಳಿಯ ಡಾ. ಎಚ್. ಎನ್. ಚಂದ್ರಶೇಖರ್ ಹಾಗೂ ಶ್ರೀಮತಿ ಮಮತಾ ಚಂದ್ರಶೇಖರ್ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ನಡೆಯಿತು. ಅವರ ನಿರಂತರ ಬೆಂಬಲದಿಂದ ಶಾಲೆಯಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ಕಾರ್ಯಕ್ರಮದ ವೇಳೆ ರಂಗಭೂಮಿ ಕಲಾವಿದರಾದ ಪೂಜಾ ರಘುನಂದನ್ ಅವರು ತಮ್ಮ ರಂಗಭೂಮಿ ಅನುಭವಗಳನ್ನು ಹಂಚಿಕೊಂಡು, ಮಕ್ಕಳ ರಂಗಭೂಮಿಯ ಮಹತ್ವವನ್ನು ವಿವರಿಸಿದರು. ಬಾಲ್ಯದಿಂದಲೇ ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ಹಲವು ವರ್ಷಗಳಿಂದ ಮಕ್ಕಳ ರಂಗಭೂಮಿ ತರಬೇತಿ ಶಿಬಿರಗಳು , ಕಾರ್ಯಾಗಾರಗಳು ಹಾಗೂ ನಾಟಕ ಪ್ರದರ್ಶನಗಳ ಮೂಲಕ ಅನೇಕ ಮಕ್ಕಳಲ್ಲಿ ರಂಗಭೂಮಿಯ ಆಸಕ್ತಿಯನ್ನು ಬೆಳೆಸಿದ್ದಾರೆ.

ರಂಗಭೂಮಿಯನ್ನು ಕೇವಲ ಮನರಂಜನೆಯ ಮಾಧ್ಯಮವಲ್ಲದೆ, ಮಕ್ಕಳ ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಶಿಸ್ತು ಮತ್ತು ಸೃಜನಶೀಲತೆಯನ್ನು ಬೆಳೆಸುವ ಶಕ್ತಿಯುತ ವೇದಿಕೆಯಾಗಿ ಅವರು ಪರಿಚಯಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಕ್ಕಳಿಗೂ ರಂಗಭೂಮಿಯ ಅವಕಾಶಗಳು ತಲುಪಬೇಕು ಎಂಬ ಉದ್ದೇಶದಿಂದ ಅವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ನಡೆಸಲಾಗುವ ವಿವಿಧ ರಂಗಭೂಮಿ ಚಟುವಟಿಕೆಗಳು, ನಾಟಕಾಭ್ಯಾಸ, ಸಂಭಾಷಣೆ, ಅಭಿನಯ ಮತ್ತು ವೇದಿಕೆ ಧೈರ್ಯವನ್ನು ಹೆಚ್ಚಿಸುವ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳನ್ನು ನಾಟಕ ಹಾಗೂ ವೇದಿಕೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸಲಾಯಿತು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಂಗಭೂಮಿಯ ಕುರಿತು ಉಪಯುಕ್ತ ಹಾಗೂ ಪ್ರೇರಣಾದಾಯಕ ಮಾಹಿತಿಯನ್ನು ಪಡೆದುಕೊಂಡರು. ಈ ಕಾರ್ಯಕ್ರಮವು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.