ಚಿಕ್ಕಮಗಳೂರು , ಫೆಬ್ರವರಿ 2026 : ಸರ್ಕಾರಿ ವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅನ್ಯಾಯkar ಪರಿಹಾರದ ವಿರುದ್ಧ ಆಕ್ರೋಶಗೊಂಡ ಶ್ರೀಗಂಧದ ಬೆಳೆಗಾರನೊಬ್ಬ ಬದುಕಿದ್ದಾಗಲೇ ತನ್ನ ವೈಕುಂಠ ಸಮಾರಾಧನೆಗೆ ಅಧಿಕಾರಿಗಳನ್ನು ಆಹ್ವಾನಿಸುವ ಮೂಲಕ ವಿನೂತನ ಹಾಗೂ ಅಣಕಭರಿತ ಪ್ರತಿಭಟನೆಗೆ ಮುಂದಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಫಲವತ್ತಾದ ಕೃಷಿ ಭೂಮಿ ಹಾಗೂ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಳೆದುಕೊಂಡಿರುವ ಶ್ರೀಗಂಧದ ಬೆಳೆಗಾರ ವಿಷುಕುಮಾರ್, ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಈ ಅಸಾಧಾರಣ ಹೋರಾಟವನ್ನು ಕೈಗೊಂಡಿದ್ದಾರೆ.
ಕಡಿಮೆ ಪರಿಹಾರಕ್ಕೆ ಆಕ್ರೋಶ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನಗೊಂಡ ಸಂದರ್ಭದಲ್ಲಿ ಅರಣ್ಯ ಇಲಾಖೆ ವಿವಿಧ ಮರಗಳಿಗೆ ವಿಭಿನ್ನ ಪರಿಹಾರ ನಿಗದಿಪಡಿಸಿದ್ದು,
-
ಮಾವಿನ ಮರಕ್ಕೆ ₹63,000
-
ತೆಂಗಿನ ಮರಕ್ಕೆ ₹37,000
-
ನಿಂಬೆ ಮರಕ್ಕೆ ₹3,480
-
ಬೇವಿನ ಮರಕ್ಕೆ ₹2,200
ಪರಿಹಾರ ನೀಡಲಾಗಿದೆ. ಆದರೆ ಅತ್ಯಂತ ದುಬಾರಿ ಹಾಗೂ ಅಪರೂಪದ ಶ್ರೀಗಂಧದ ಮರಕ್ಕೆ ಕೇವಲ ₹420 ಮಾತ್ರ ನಿಗದಿಪಡಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯಾಯಾಲಯದ ಆದೇಶಕ್ಕೂ ಬೆಲೆ ಇಲ್ಲ?
ಒಂದು ಮರಕ್ಕೆ ಕನಿಷ್ಠ ₹25,000 ಪರಿಹಾರ ನೀಡುವಂತೆ ಮತ್ತು ವೈಜ್ಞಾನಿಕ ದರ ಅನ್ವಯಿಸುವಂತೆ ನ್ಯಾಯಾಲಯ ಸೂಚಿಸಿದ್ದರೂ, ಅಧಿಕಾರಿಗಳು ಈ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ವಿಷುಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
4–5 ವರ್ಷಗಳ ಹೋರಾಟ, ದಯಾಮರಣ ಅರ್ಜಿ
ಕಳೆದ 4–5 ವರ್ಷಗಳಿಂದ ನ್ಯಾಯಕ್ಕಾಗಿ ವಿವಿಧ ಕಚೇರಿಗಳಿಗೆ ಅಲೆದು ಸುಸ್ತಾಗಿರುವ ವಿಷುಕುಮಾರ್, ವಾರದ ಹಿಂದೆಯಷ್ಟೇ ಸರ್ಕಾರಕ್ಕೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಶಿವಮೊಗ್ಗದ ಸಿಸಿಎಫ್ ಕಚೇರಿ ಎದುರೇ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು ಎಂದು ತಿಳಿದುಬಂದಿದೆ.
ಬದುಕಿದ್ದಾಗಲೇ ವೈಕುಂಠ ಸಮಾರಾಧನೆ
ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತಿರುವ ವಿಷುಕುಮಾರ್, ಇದೀಗ ತಮ್ಮ ಹೋರಾಟವನ್ನು ವಿಭಿನ್ನ ಹಂತಕ್ಕೆ ಕೊಂಡೊಯ್ದಿದ್ದಾರೆ.
ಫೆಬ್ರವರಿ 9ರಂದು
-
ಬೆಳಗ್ಗೆ 10 ಗಂಟೆಗೆ ಸಂತಾಪ ಸಭೆ
-
ಮಧ್ಯಾಹ್ನ 1 ಗಂಟೆಗೆ ತಿಥಿ ಊಟ
ಆಯೋಜಿಸಿರುವುದಾಗಿ ತಿಳಿಸಿದ್ದಾರೆ.
ಆಹ್ವಾನ ಪತ್ರಿಕೆಯಲ್ಲಿ ಅಣಕ
ವೈಕುಂಠ ಸಮಾರಾಧನೆ ಆಮಂತ್ರಣ ಪತ್ರಿಕೆಯಲ್ಲಿ ಅತಿಥಿಗಳ ಪಟ್ಟಿಯೂ ಗಮನ ಸೆಳೆದಿದೆ.
ಈ ಕಾರ್ಯಕ್ರಮಕ್ಕೆ
-
ಎನ್‌ಎಚ್‌ಎಐ ಅಧಿಕಾರಿಗಳು
-
ಅರಣ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು
-
ವಿಶೇಷ ಭೂಸ್ವಾಧೀನಾಧಿಕಾರಿಗಳು
ಹಾಜರಾಗುವಂತೆ ಆಹ್ವಾನಿಸಿದ್ದು, ಪೊಲೀಸ್ ಇಲಾಖೆಯ ಒಳ್ಳೆಯ ಅಧಿಕಾರಿಗಳು ಬರುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಈ ವಿಭಿನ್ನ ಪ್ರತಿಭಟನೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸರ್ಕಾರದ ನೀತಿ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈತರ ಮೇಲಿನ ಅನ್ಯಾಯದ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.









