ಹಾಸನ: ಇಂದಿನ ಆಹಾರ ಪದ್ಧತಿಗಳಿಂದಾಗಿ ಮಾನವನ ಆರೋಗ್ಯ ಅಪಾಯದಲ್ಲಿದ್ದು, ಇದಕ್ಕೆ ಪರಿಹಾರ ಸಿರಿಧಾನ್ಯ ಹಾಗೂ ಸಾವಯವ ಆಹಾರಗಳತ್ತ ಮರಳುವುದೇ ಆಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ಜನರಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಹಾಸನ ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಜಿಲ್ಲಾಧಿಕಾರಿಯವರು ಸ್ವತಃ ಎತ್ತಿನಗಾಡಿಯಲ್ಲಿ ಕುಳಿತು ಸಾಗುವ ಮೂಲಕ ಸಾಂಪ್ರದಾಯಿಕ ಕೃಷಿ ಸಂಸ್ಕೃತಿಗೆ ಗೌರವ ಸಲ್ಲಿಸಿದರು. ಇದು ರೈತರು ಹಾಗೂ ಸಾರ್ವಜನಿಕರಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಬತಾಕುಮಾರಿ, “ನಮ್ಮ ನಡಿಗೆ ಸಿರಿಧಾನ್ಯಗಳ ಕಡೆಗೆ ಇರಬೇಕು. ಆರೋಗ್ಯಕರ ಜೀವನದ ಮೂಲ ಸಿರಿಧಾನ್ಯ ಮತ್ತು ಸಾವಯವ ಆಹಾರದಲ್ಲೇ ಇದೆ” ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಹೆಚ್ಚುತ್ತಿರುವುದು ಆಹಾರದಲ್ಲಿರುವ ರಾಸಾಯನಿಕಗಳು ಹಾಗೂ ವಿಷಕಾರಿ ಅಂಶಗಳ ಪರಿಣಾಮವಾಗಿದೆ. ಇದರಿಂದ ಹೊರಬರಲು ಜನರು ಸಹಜ, ಶುದ್ಧ ಮತ್ತು ರೈತರು ಬೆಳೆದ ಆಹಾರವನ್ನು ಸೇವಿಸುವತ್ತ ಗಮನಹರಿಸಬೇಕು ಎಂದರು.
ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡುವ ಅಗತ್ಯವಿದೆ ಎಂದ ಅವರು, ಇಂದಿನ ದಿನಗಳಲ್ಲಿ ಕೃಷಿ ಕೇವಲ ವ್ಯವಸಾಯವಾಗಿ ಉಳಿದಿಲ್ಲ, ಅದು ಒಂದು ದೊಡ್ಡ ಉದ್ಯಮವಾಗಿ ರೂಪುಗೊಂಡಿದೆ. ಕೃಷಿಯನ್ನು ಉದ್ಯಮವಾಗಿ ಯಶಸ್ವಿಗೊಳಿಸಲು ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಅತ್ಯವಶ್ಯಕವಾಗಿದೆ.
ಸರ್ಕಾರ ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕರೂ ಸಾವಯವ ಉತ್ಪನ್ನಗಳನ್ನು ಬಳಸುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು. ಇದರಿಂದ ರೈತರ ಬದುಕು ಸುಧಾರಿಸುವುದರ ಜೊತೆಗೆ ಸಾರ್ವಜನಿಕರ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಹೇಳಿದರು. ನಾವೆಲ್ಲರೂ ಸೇರಿ ಸಿರಿಧಾನ್ಯಗಳ ಕಡೆಗೆ ನಮ್ಮ ನಡಿಗೆಯನ್ನು ಮುಂದುವರೆಸೋಣ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ಕಣಗಾಲ್ ಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಪಿ. ಮದನ್ ಗೌಡ, ಜಿಲ್ಲಾ ಅಧ್ಯಕ್ಷ ಜೆ.ಆರ್, ಕೆಂಚೇಗೌಡ, ಯುವಜನ ನಿರ್ದೇಶಕ ಚಂದ್ರಮೌಳಿ, ಮಂಜುನಾಥ್, ತೋಟಗಾರಿಕಾ ಇಲಾಖೆಯ ನಿರ್ದೇಶಕ ಯೋಗೀಶ್, ಮಧುಸೂದನ್ ಸೇರಿದಂತೆ ಹಲವು ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.










