Hassan: ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಖಚಿತ; ಮಹಿಳಾ ಅಧಿಕಾರಿಗಳ ಮೇಲಷ್ಟೇ ರೇವಣ್ಣಗೇಕೆ ಕೋಪ? ಸಂಸದ ಶ್ರೇಯಸ್ ಪಟೇಲ್ ವಾಗ್ದಾಳಿ

  • Hassan|ಹಾಸನ (Kannada Post): ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹಾಸನ ಸಂಸದ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಹಾಸನ ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ವಿರುದ್ಧ ಸಂಸದರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

​ಹಾಸನ hassanದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಹಾಗೂ ಅಧಿಕಾರಿಗಳ ವಿರುದ್ಧದ ಆರೋಪಗಳ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯಿಸಿದರು.

ಶಿವಲಿಂಗಣ್ಣ ಸಚಿವರಾಗುವುದು ಖಚಿತ:

ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರದ ಬಗ್ಗೆ ಮಾತನಾಡಿದ ಅವರು, “ಈ ಬಾರಿ ಖಂಡಿತವಾಗಿಯೂ ಹಾಸನ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುವ ಸಂಪೂರ್ಣ ಭರವಸೆ ನಮಗಿದೆ. ಹಿರಿಯ ಶಾಸಕರಾಗಿರುವ ಕೆ.ಎಂ. ಶಿವಲಿಂಗಣ್ಣ ಅವರು ಸಚಿವರಾಗುವುದು ಬಹುತೇಕ ಖಚಿತ” ಎಂದು ತಿಳಿಸಿದರು.

ರೇವಣ್ಣ ಆರೋಪ ಅಕ್ಷಮ್ಯ ಅಪರಾಧ, ಕಾನೂನುಬಾಹಿರ:

ಹಾಸನ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಎಚ್.ಡಿ. ರೇವಣ್ಣ ಮಾಡಿದ್ದ ಟೀಕೆಗಳಿಗೆ ತಿರುಗೇಟು ನೀಡಿದ ಶ್ರೇಯಸ್ ಪಟೇಲ್, “ಜಿಲ್ಲಾಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಜನರೇ ಹೇಳುತ್ತಿದ್ದಾರೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಎಚ್.ಡಿ. ರೇವಣ್ಣ ಅವರು ಯಾವ ವಿಷಯಕ್ಕೆ ಆಪಾದನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗಿಲ್ಲ. ಯಾವುದೇ ಆರೋಪ ಮಾಡುವುದಿದ್ದರೂ ಅಗತ್ಯ ದಾಖಲೆಗಳೊಂದಿಗೆ ಮಾಡಬೇಕು” ಎಂದು ಸವಾಲು ಹಾಕಿದರು.

​”ಸರ್ಕಾರಿ ಕಚೇರಿಯಲ್ಲಿಯೇ ಅಧೀನ ಅಧಿಕಾರಿಗಳ ಜೊತೆ ಕುಳಿತುಕೊಂಡು ಹಿರಿಯ ಅಧಿಕಾರಿಗಳ ಬಗ್ಗೆ ಮಾತನಾಡುವುದು ಅಕ್ಷಮ್ಯ ಅಪರಾಧ ಹಾಗೂ ಕಾನೂನುಬಾಹಿರ. ಹಿರಿಯ ಶಾಸಕರಾಗಿರುವ ಅವರು ಮೊದಲು ಇದನ್ನು ತಿಳಿದುಕೊಳ್ಳಬೇಕು. ಸರ್ಕಾರಿ ಸಭೆಯಲ್ಲಿ ಅಧಿಕಾರಿಯೊಬ್ಬರ ಬಗ್ಗೆ ಈ ರೀತಿ ಮಾತನಾಡುವುದು ಸಂವಿಧಾನ, ಕಾನೂನು, ಶಾಸಕಾಂಗ ಹಾಗೂ ಕಾರ್ಯಾಂಗದ ನಿಯಮಗಳಲ್ಲೇ ಇಲ್ಲ. ಇದನ್ನು ಅರಿತು ಅವರು ಮುಂದೆ ಅಧಿಕಾರಿಗಳ ಬಗ್ಗೆ ಮಾತನಾಡಲಿ” ಎಂದು ಎಚ್ಚರಿಕೆ ನೀಡಿದರು.

ರೇವಣ್ಣಗೆ ಮಹಿಳಾ ಅಧಿಕಾರಿಗಳೆಂದರೆ ಏಕೆ ವಿರೋಧ?

“ಜಿಲ್ಲಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ, ಒಂದು ವೇಳೆ ಹಾಗಲ್ಲದಿದ್ದರೆ ಸಾರ್ವಜನಿಕರೇ ಮಾಧ್ಯಮಗಳ ಮುಂದೆ ಬಂದು ಹೇಳುತ್ತಿದ್ದರು. ರೇವಣ್ಣ ಅವರು ಹಿಂದಿನ ಜಿಲ್ಲಾಧಿಕಾರಿ (ಅವರೂ ಮಹಿಳೆ) ಬಗ್ಗೆಯೂ ಇದೇ ರೀತಿ ಮಾತನಾಡಿದ್ದರು. ಒಂದು ಕಡೆ 33% ಮಹಿಳಾ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದರೆ, ಇವರೇಕೆ ಮಹಿಳಾ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

​”ಇಡೀ ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುವ ಏಕೈಕ ಶಾಸಕ ಎಂದರೆ ಅದು ರೇವಣ್ಣ ಇರಬೇಕು. ಅಧಿಕಾರಿಗಳು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದರೆ, ಅವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ” ಎಂದು ಶ್ರೇಯಸ್ ಪಟೇಲ್ ತೀವ್ರ ವಾಗ್ದಾಳಿ ನಡೆಸಿದರು.