ಸಕಲೇಶಪುರ : ಹಿರಿಯ ಕಾಂಗ್ರೆಸ್ ನಾಯಕ ಡಿ.ಸಿ. ಸಣ್ಣಸ್ವಾಮಿಯವರ ಮೇಲೆ ಹಲ್ಲೆ – ಮುರಳಿ ಮೋಹನ್ ವಿರುದ್ಧ ಆಕ್ರೋಶ

ಸಕಲೇಶಪುರ : ಸಕಲೇಶಪುರದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದ ವೇಳೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಡಿ.ಸಿ. ಸಣ್ಣಸ್ವಾಮಿಯವರ ಕೊರಳಪಟ್ಟಿಗೆ ಕೈ ಹಾಕಿ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ವಿರುದ್ಧ ರತನ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಮುರಳಿ ಮೋಹನ್ ಒಬ್ಬ ಅನಾಗರಿಕನಂತೆ ವರ್ತಿಸಿ ಪಕ್ಷದ ಹಿರಿಯ ನಾಯಕರಿಗೆ ಅವಮಾನ ಮಾಡಿರುವುದು ಖಂಡನೀಯ ಎಂದು ಹೇಳಿದರು. ಇಂತಹ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿಲ್ಲ. ಈತನ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪಗಳಿದ್ದು, ಜನಪ್ರತಿನಿಧಿಯಾಗಲು ಯಾವುದೇ ನೈತಿಕ ಅರ್ಹತೆಯಿಲ್ಲ ಎಂದು ಟೀಕಿಸಿದರು.

ಹಾಸನ ಜಿಲ್ಲೆಯವರು ಆಗಿರುವ ಮಾಜಿ ಶಾಸಕ ಡಿ.ಪಿ. ಮಲ್ಲೇಶ್ ಹಾಗೂ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಸಿ. ಸಣ್ಣಸ್ವಾಮಿಯವರು ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ, ದಲಿತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ, ಅನೇಕ ಕುಟುಂಬಗಳಿಗೆ ಆಶ್ರಯದ ಬೆಳಕಾಗಿದ್ದಾರೆ ಎಂದು ನಾಯಕರರು ಸ್ಮರಿಸಿದರು.

ಆದರೆ ಸಕಲೇಶಪುರ ಕ್ಷೇತ್ರಕ್ಕೆ ಮುರಳಿ ಮೋಹನ್ ನೀಡಿದ ಕೊಡುಗೆ ಶೂನ್ಯ. ಪರಾಭವಗೊಂಡ ಬಳಿಕ ದರ್ಪದ ರಾಜಕಾರಣ, ದೌರ್ಜನ್ಯ ಹಾಗೂ ಬೆದರಿಕೆಗಳ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಮತದಾರರ ಮೇಲೆ ಒತ್ತಡ ತರುತ್ತಿರುವುದು ಪಕ್ಷಕ್ಕೆ ಭಾರೀ ಹಾನಿ ಮಾಡುತ್ತಿದೆ ಎಂದು ಆರೋಪಿಸಿದರು.

ಡಿ.ಸಿ. ಸಣ್ಣಸ್ವಾಮಿಯವರ ಮೇಲೆ ನಡೆದ ಹಲ್ಲೆಯನ್ನು ಇಡೀ ಹಾಸನ ಜಿಲ್ಲೆಯ ಎಸ್ಸಿ-ಎಸ್‌ಟಿ ಸಮುದಾಯದ ಮೇಲೆ ನಡೆದ ಹಲ್ಲೆಯಂತೆ ಪರಿಗಣಿಸಬೇಕು ಎಂದು ಹೇಳಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಮುರಳಿ ಮೋಹನ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಗೋಷ್ಠಿಯಲ್ಲಿ ಸದಾಶಿವ್, ಕೃಷ್ಣಮೂರ್ತಿ, ರುದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.