ಹಾಸನ ,ಫೆಬ್ರವರಿ,24,2026(www.kannadapost.com): ಪರಿಸರ ನಾಶಕ್ಕೆ ಪ್ರಮುಖ ಕಾರಣ ಪರಿಸರ ಶಿಕ್ಷಣದ ಕೊರತೆ, ಆಲಸ್ಯ, ಜಲ ಅನಕ್ಷರತೆ, ಸ್ವಾರ್ಥ ಹಾಗೂ ದುರಾಸೆಯ ಸಂಸ್ಕೃತಿ ಎಂದು ನಿಟ್ಟೂರು ಗ್ರಾಮದ ವೈದ್ಯಾಧಿಕಾರಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಹಾಸನ ತಾಲ್ಲೂಕು ಅಧ್ಯಕ್ಷ ಡಾ. ಎಚ್.ಜಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಹಾಸನ ನಗರದ ಹೌಸಿಂಗ್ ಬೋರ್ಡ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಸನ ತಾಲ್ಲೂಕು ಬಿಜಿವಿಎಸ್ ಮತ್ತು ಶಾಲೆಯ ಇಕೋ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಶಿಕ್ಷಣ ಮತ್ತು ಕಸದ ನಿರ್ವಹಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಮಕ್ಕಳೇ ಪರಿಸರ ಸಂರಕ್ಷಣೆಯ ನಿಜವಾದ ಶಕ್ತಿ”
ಮಕ್ಕಳೇ ಪರಿಸರ ರಕ್ಷಣೆಯ ನಿಜವಾದ ಶಕ್ತಿ ಎಂದು ಹೇಳಿದ ಡಾ. ಮಂಜುನಾಥ್, ಬಾಲ ಪರಿಸರ ಹೋರಾಟಗಾರ್ತಿ Greta Thunberg ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.
“ಒಬ್ಬ ವ್ಯಕ್ತಿಗೆ ಸರಾಸರಿ 400 ಮರಗಳು ಅಗತ್ಯವಿದ್ದರೆ, ಭಾರತದಲ್ಲಿ ಕೇವಲ 28 ಮರಗಳಷ್ಟೇ ಲಭ್ಯವಿವೆ. ಮರಗಳು ಇಂಗಾಲವನ್ನು ಶೋಷಿಸಿ ಆಮ್ಲಜನಕವನ್ನು ನೀಡುತ್ತವೆ. ಒಂದು ಪೂರ್ಣ ಬೆಳೆದ ಮರವು ಸುಮಾರು 27 ರಿಂದ 30 ಲಕ್ಷ ರೂ. ಮೌಲ್ಯದ ಆಮ್ಲಜನಕ ನೀಡುತ್ತದೆ,” ಎಂದು ತಿಳಿಸಿದರು.
ಕಸದ ನಿರ್ವಹಣೆ ಬಗ್ಗೆ ಅರಿವು ಅಗತ್ಯ
ಕಸವೆಂದರೆ ಸಂಪೂರ್ಣ ವ್ಯರ್ಥವಲ್ಲ. ಸರಿಯಾದ ವಿಂಗಡಣೆ ಮಾಡಿದರೆ ಅದು ಮತ್ತೊಬ್ಬರಿಗೆ ಉಪಯುಕ್ತವಾಗಬಹುದು ಎಂದು ಹೇಳಿದರು.
ಜೂನ್ 5ರ ವಿಶ್ವ ಪರಿಸರ ದಿನದಂದು ಗಿಡ ನೆಡುವುದಷ್ಟೇ ಸಾಲದು
ನೆಟ್ಟ ಗಿಡಗಳನ್ನು ಕಾಪಾಡುವುದು ಮುಖ್ಯ
ಪ್ಲಾಸ್ಟಿಕ್ ವಿಂಗಡಣೆ ಮತ್ತು ಪುನರ್‌ಬಳಕೆ ಅಗತ್ಯ
ನಗರದ ಸುಶಿಕ್ಷಿತರೂ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಹಾಗೂ ಸುಡುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಪ್ರಾತ್ಯಕ್ಷಿಕೆ ಹಾಗೂ ಪುಸ್ತಕ ವಿತರಣೆ
ಕಾರ್ಯಕ್ರಮದಲ್ಲಿ ಬಿಜಿವಿಎಸ್ ಸದಸ್ಯೆ ಮೋನಿಕಾ ಪ್ಲಾಸ್ಟಿಕ್ ಬಂಧನ ಮತ್ತು ಪರಿಸರ ಸ್ಪಂದನ ಕುರಿತು ಮಾತನಾಡಿ ಪ್ರಾತ್ಯಕ್ಷಿಕೆ ನೀಡಿದರು. ಅಗಸ್ತ್ಯ ಸಂಸ್ಥೆಯ ರಾಮಜಿ ಅವರು ಪ್ಲಾಸ್ಟಿಕ್ ಕುರಿತು ಅರಿವು ಮೂಡಿಸುವ ಅಭ್ಯಾಸ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಾ ಎನ್.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ತಾಲೂಕು ಕಾರ್ಯದರ್ಶಿ ಲೋಲಾಕ್ಷಿ ಬಿ.ಕೆ. ನಿರೂಪಿಸಿದರು. ರವೀಂದ್ರ ಸ್ವಾಗತಿಸಿ, ಮೀನಾಕ್ಷಿ ಆರ್. ವಂದಿಸಿದರು.










