ಹಾಸನ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಹಾಸನ ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಇದ್ದ 15,42,802 ಮತದಾರರ ಪೈಕಿ 13,75,517 ಮತದಾರರನ್ನು ಕರಡು ಪಟ್ಟಿಯಲ್ಲಿ ಉಳಿಸಲಾಗಿದ್ದು, ವಿವಿಧ ಕಾರಣಗಳಿಂದ 1,67,285 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಈ ಮೂಲಕ ಪರಿಷ್ಕರಣೆಯ ಬಳಿಕ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆಯು ಶೇ.89.16ರಷ್ಟಾಗಿದೆ.
1.67 ಲಕ್ಷ ಹೆಸರುಗಳು ಪಟ್ಟಿಯಿಂದ ಹೊರಕ್ಕೆ
ವಿವಿಧ ಕಾರಣಗಳಿಂದ ಒಟ್ಟು 1,67,285 ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ 52,022 ಮಂದಿ ಮೃತಪಟ್ಟಿರುವುದು, 73,964 ಮಂದಿ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವುದು, 13,616 ಪುನರಾವರ್ತಿತ (ಡೂಪ್ಲಿಕೇಟ್) ಹೆಸರುಗಳು, 24,632 ಗೈರು ಮತದಾರರು ಹಾಗೂ 3,051 ಮಂದಿ ಇತರೆ ಕಾರಣಗಳಿಂದ ಪಟ್ಟಿಯಿಂದ ಹೊರಗಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಲೂಕುವಾರು ಮತದಾರರ ಹೆಸರುಗಳ ಕಡಿತ
ಹಾಸನ: 47,032
ಶ್ರವಣಬೆಳಗೊಳ: 22,375
ಅರಸೀಕೆರೆ: 16,297
ಬೇಲೂರು: 19,092
ಹೊಳೆನರಸೀಪುರ: 21,559
ಹೊಳೆನರಸೀಪುರ: 21,559
ಅರಕಲಗೂಡು: 22,864
ಸಕಲೇಶಪುರ: 18,066
ಒಟ್ಟು 1,67,285 ಮತದಾರರ ಹೆಸರುಗಳು ವಿವಿಧ ಕಾರಣಗಳಿಂದ ಪಟ್ಟಿಯಿಂದ ಹೊರಗಾಗಿವೆ.
ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು
SIR ಪ್ರಕ್ರಿಯೆಯ ಬಳಿಕ ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ 6,80,925 ಪುರುಷ ಮತದಾರರು ಹಾಗೂ 6,94,559 ಮಹಿಳಾ ಮತದಾರರು ಇದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.
79,778 ಮತದಾರರಿಗೆ ನೋಟಿಸ್
ಜಿಲ್ಲೆಯಲ್ಲಿ 23,641 ಮತದಾರರ ಪ್ರಕರಣಗಳು ‘ನೋ ಮ್ಯಾಚಿಂಗ್’ ಹಾಗೂ 56,137 ಮತದಾರರ ಪ್ರಕರಣಗಳು ಹೊಂದಾಣಿಕೆಯಾಗದ/ಪರಿಶೀಲನೆಗೆ ಒಳಪಟ್ಟ ಪ್ರಕರಣಗಳಾಗಿವೆ. ಒಟ್ಟು 79,778 ಮತದಾರರಿಗೆ ಜಿಲ್ಲಾಡಳಿತದಿಂದ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ನೋಟಿಸ್ ಪಡೆದ ಮತದಾರರು ತಮ್ಮ ಹೆಸರು ಮತ್ತು ಮತದಾನದ ಹಕ್ಕನ್ನು ಸಮರ್ಥಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಚುನಾವಣಾ ಆಯೋಗ ಸೂಚಿಸಿರುವ ಮಾನ್ಯ ದಾಖಲೆಗಳ ಆಧಾರದಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸೆಪ್ಟೆಂಬರ್ 23ರವರೆಗೆ ಹಕ್ಕು, ಆಕ್ಷೇಪಣೆ ಸಲ್ಲಿಸಲು ಅವಕಾಶ
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.
ಈ ಅವಧಿಯಲ್ಲಿ ಮತದಾರರು ತಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಕೈಬಿಡಲಾಗಿದ್ದರೆ ಅಥವಾ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಇದ್ದರೆ, ಸೂಕ್ತ ದಾಖಲೆಗಳೊಂದಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಕ್ಷೇತ್ರವಾರು ವಿವರ
SIR ಪ್ರಕ್ರಿಯೆಯಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪಟ್ಟಿಯಿಂದ ಹೊರಗಾದ ಮತದಾರರ ವಿವರ ಹೀಗಿದೆ:
ಶ್ರವಣಬೆಳಗೊಳ: 2,14,454 ಮತದಾರರಿದ್ದು, ಈ ಪೈಕಿ 22,375 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಅರಸೀಕೆರೆ: 2,21,014 ಮತದಾರರಿದ್ದು, 16,297 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ಬೇಲೂರು: 2,04,786 ಮತದಾರರಿದ್ದು, 19,092 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಹಾಸನ: 2,35,943 ಮತದಾರರಿದ್ದು, 47,032 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಹೊಳೆನರಸೀಪುರ: 2,24,676 ಮತದಾರರಿದ್ದು, 21,559 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಅರಕಲಗೂಡು: 2,36,667 ಮತದಾರರಿದ್ದು, 22,864 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ಸಕಲೇಶಪುರ: 2,05,262 ಮತದಾರರಿದ್ದು, 18,066 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.












