ಹಾಸನ (kannadapost.com): ತಮ್ಮ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ. ರೇವಣ್ಣ ಮಾಡಿರುವ ಆರೋಪಗಳಿಗೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ನಮ್ಮನ್ನು ಯಾರೋ ಎಲ್ಲಿಂದಲೋ ಹಿಡಿದು ತಂದು ಈ ಸ್ಥಾನದಲ್ಲಿ ಕೂರಿಸಿಲ್ಲ, ನಾವೆಲ್ಲರೂ ಬಹಳ ಕಷ್ಟಪಟ್ಟು ಓದಿ ಈ ಹುದ್ದೆಗೆ ಬಂದಿದ್ದೇವೆ. ಅಧಿಕಾರಿಗಳ ವಿರುದ್ಧ ಕೀಳು ಶಬ್ದಗಳನ್ನು ಬಳಸಬೇಡಿ” ಎಂದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ಈ ಡಿಸಿಯನ್ನು ಎಲ್ಲಿಂದ ಹಿಡಿದು ತಂದು ಕೂರಿಸಿದ್ದಾರೋ’ ಎನ್ನುವ ರೇವಣ್ಣ ಅವರ ಟೀಕೆಗೆ ಅಸಮಾಧಾನ ಹೊರಹಾಕಿದರು.
ಗೌರವಯುತ ಟೀಕೆಗಳಿಗೆ ಸ್ವಾಗತವಿದೆ:
“ಶಾಸಕರು ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಒಬ್ಬ ಅಧಿಕಾರಿ ಕಾನೂನು ಮೀರಿ ಕೆಲಸ ಮಾಡಿದ್ದರೆ ಅಥವಾ ಕರ್ತವ್ಯ ಲೋಪವೆಸಗಿದ್ದರೆ, ಅದನ್ನು ನಿಯಮಾನುಸಾರ ತಿದ್ದಿ ಹೇಳುವ ಅಧಿಕಾರ ಅವರಿಗೆ ಖಂಡಿತಾ ಇದೆ. ಆದರೆ, ಜಿಲ್ಲಾಧಿಕಾರಿಯಂತಹ ಉನ್ನತ ಸ್ಥಾನದಲ್ಲಿರುವ ನಮಗೆ ವೈಯಕ್ತಿಕವಾಗಿ ಯಾವುದೇ ಗೌರವ ನೀಡದೆ ನಿಂದಿಸುವುದು ಸರಿಯಲ್ಲ. ಈ ರೀತಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿದರೆ ಜನರಿಗೂ ತಪ್ಪು ಮಾಹಿತಿ ರವಾನೆಯಾಗುತ್ತದೆ” ಎಂದು ಡಿಸಿ ಬೇಸರ ವ್ಯಕ್ತಪಡಿಸಿದರು.
ಮೀಸಲಾತಿ ಗೊಂದಲದ ಬಗ್ಗೆ ಸ್ಪಷ್ಟನೆ:
ಸ್ಥಳೀಯ ಸಂಸ್ಥೆಗಳ ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಎದ್ದಿರುವ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ಮೀಸಲಾತಿ ನಿಗದಿಪಡಿಸುವ ಸಂಪೂರ್ಣ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ತಹಶೀಲ್ದಾರ್‌ಗಳಿಗೆ ಯಾವುದೇ ಬದಲಾವಣೆ ಮಾಡುವ ಅಧಿಕಾರವಿರುವುದಿಲ್ಲ. ನಾವು ಮೀಸಲಾತಿಯನ್ನು ಗ್ರಾಮವಾರು ಪರಿಗಣಿಸುತ್ತೇವೆಯೇ ಹೊರತು, ಕ್ಷೇತ್ರವಾರು ಅಲ್ಲ. ಒಂದು ವೇಳೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ (SC) ಜನಸಂಖ್ಯೆ ಶೂನ್ಯವಿದ್ದರೂ, ಬೇರೆ ಕಡೆ ಇರುವ ಆಧಾರದ ಮೇಲೆ ನಿಯಮಾನುಸಾರ ಬದಲಾವಣೆಗಳನ್ನು ಮಾಡಿದ್ದೇವೆ” ಎಂದರು.
”ಕರಡು ಪ್ರತಿಯನ್ನು ಪ್ರಕಟಿಸಲು ಸರ್ಕಾರದಿಂದ ನಮಗೆ ಅನುಮತಿಯಿಲ್ಲ. ಒಂದು ವೇಳೆ ಕಳೆದ ಬಾರಿ SC ಮೀಸಲಾತಿ ಇದ್ದು, ಈ ಬಾರಿಯೂ ಅದೇ ರೀತಿ ಮರುಕಳಿಸಿದ್ದರೆ, ಅಂತಹ ನಿರ್ದಿಷ್ಟ ಸ್ಥಳಗಳ ಬಗ್ಗೆ ಲಿಖಿತವಾಗಿ ಅಕ್ಷೇಪಣೆ ಅಥವಾ ಮನವಿ ಸಲ್ಲಿಸಲಿ. ಅದನ್ನು ಪರಿಶೀಲಿಸಿ ಸರಿಪಡಿಸಲು ನಾವು ಸಿದ್ಧರಿದ್ದೇವೆ. ಆದರೆ, ಅವರು ಹೇಳಿದ ರೀತಿಯಲ್ಲೇ ಎಲ್ಲವನ್ನೂ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿದರು.
ಯಾವ ಕಡತ ಬಾಕಿ ಇದೆ? ಪಟ್ಟಿ ಕೊಡಿ:
“ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ಕಡತಗಳು ವಿಲೇವಾರಿಯಾಗುತ್ತಿಲ್ಲ ಎಂಬ ಆರೋಪಗಳಿದ್ದರೆ, ಯಾವ ಕಡತ ಬಾಕಿ ಇದೆ ಎಂಬುದರ ಬಗ್ಗೆ ನಮಗೊಂದು ಪಟ್ಟಿ ಒದಗಿಸಲಿ. ಅದನ್ನು ಪರಿಶೀಲಿಸಿ ತಕ್ಷಣವೇ ವಿಲೇವಾರಿ ಮಾಡುತ್ತೇವೆ. ಆದರೆ, ನೀವು ಬಳಸಿರುವ ಶಬ್ದಗಳನ್ನು ನಮಗಷ್ಟೇ ಅಲ್ಲ, ಮತ್ಯಾವ ಅಧಿಕಾರಿಗಳಿಗೂ ಬಳಸಬೇಡಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ” ಎಂದು ಡಿಸಿ ಲತಾಕುಮಾರಿ ಹೇಳಿದರು.












