ಹೊಳೆನರಸೀಪುರ ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ರೌಂಡ್ಸ್:‌ ಜನರು, ವಿದ್ಯಾರ್ಥಿಗಳ ಅಹವಾಲು ಆಲಿಸಿದ ಡಿಸಿ

ಹೊಳೆನರಸೀಪುರ : ತಾಲೂಕಿಗೆ ಭೇಟಿ ಕೊಟ್ಟ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಇಲಾಖೆ ವೀಕ್ಷಣೆ ಜತೆಗೆ ದೇವಾಲಯಗಳಲ್ಲೂ ಪೂಜೆ ಸಲ್ಲಿಸಿದರು.

ಪಟ್ಟಣದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಸ್ಯೆಗಳು ಎಲ್ಲ ಕಡೆ ಇದ್ದೇ ಇರುತ್ತದೆ. ನಮ್ಮ ಅವಧಿಯಲ್ಲಿ ಸಮರ್ಪಕವಾಗಿ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಗಮನ ಹರಿಸಬೇಕು.

ನದಿಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಮುಸ್ಲಿಂ ಬಾಹುಳ್ಯದ ಬಡಾವಣೆಯ ಯಾಸೀನ್ ನಗರ ಮಳೆಗಾಲದಲ್ಲಿ ನದಿ ತುಂಬಿ ಮನೆಗಳು ಮುಳುಗುತ್ತವೆ ಎಂಬ ಸಮಸ್ಯೆಗಳು ಗಂಭೀರವಾಗಿವೆ. ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆ ಇದೆ. ದೊಡ್ಡ ತಾಯಿ, ಮಕ್ಕಳ ಆಸ್ಪತ್ರೆಗೆ ಒಬ್ಬರೇ ಪ್ರಸೂತಿ ತಜ್ಞರಿದ್ದಾರೆ. ಸರಕಾರಿ ಕಾಲೇಜುಗಳು ಸೌಲಭ್ಯ ಪೂರಕವಾಗಿವೆ.

ಆದರೆ ಉನ್ನತ ವ್ಯಾಸಂಗ ಅವಕಾಶ ಪಡೆಯಲು ಬೇಕಿರುವ ಸಿಇಟಿ ಹಾಗೂ ನೀಟ್ ಕೋಚಿಂಗ್ ಖಾಸಗಿ ಕಾಲೇಜಿನಂತೆ ಇಲ್ಲದಿರುವ ಬಗ್ಗೆ ಸಮಸ್ಯೆಗಳನ್ನು ಆಲಿಸಿದರು.

ಪ್ರತಿ ತಾಲೂಕಿಗೂ ಭೇಟಿ ನೀಡುತ್ತೇನೆ. ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದ ನಂತರವೇ ಅದರ ನೈಜ ಸ್ವರೂಪ ಅರಿಯಲು ಸಾಧ್ಯ  ಹೀಗಾಗಿ ಭೇಟಿ ನೀಡುತ್ತಿದ್ದೇನೆ. ಸೂಕ್ತ ಪರಿಹಾರ ಕಂಡುಕೊಡುವ ಬಗ್ಗೆ ಪ್ರಯತ್ನಿಸಬಹುದು. ಇಲ್ಲಿನ ಪ್ರಶಾಂತ ವಾತಾವರಣ, ದೇಗುಲಗಳ ಸೊಬಗು ಭಕ್ತಿ ಭಾವ ಮೂಡಿಸಿವೆ. ಹಂಗರಹಳ್ಳಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಪೂರ್ವ ಪ್ರಾಥಮಿಕ ಶಾಲೆಯನ್ನು ಗ್ರಾಮದ ಮುಖಂಡರು ದತ್ತು ಪಡೆದು ಸವಲತ್ತು ಒದಗಿಸಿಕೊಟ್ಟಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ರಸ್ತೆಗೆ ಅಡ್ಡಲಾಗಿ ಸಾರ್ವಜನಿಕ ಸಮೂದಾಯ ಹೆಸರಿನ ಗಣಪತಿ ಪೆಂಡಾಲ್ ನಿರ್ಮಿಸಿರುವ ಬಗ್ಗೆ ಸಾಕಷ್ಟು ದೂರು ನೀಡಿದ್ದೇವೆ. ಆದರೆ ಈವರೆಗೆ ಕ್ರಮಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು ವರ್ಗವಣೆಯಾಗುತ್ತಿದ್ದರೂ, ಸಮಸ್ಯೆ ಕುರಿತು ಅಹವಾಲು ಮಾತ್ರ ಹಾಗೇ ಉಳಿದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಮುತ್ತುರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್, ಹಾಗೂ ಕಾಂಗ್ರೆಸ್ ಮುಖಂಡ ಬಾಗೀವಾಳು ಮಂಜುನಾಥ್, ಗಮನಕ್ಕೆ ತಂದರು.

ಈ ಕುರಿತಾದ ಎಲ್ಲ ದಾಖಲೆಗಳೊಂದಿಗೆ ವಿವರ ಒದಗಿಸುವಂತೆ ತಹಸೀಲ್ದಾರ್ ಮತ್ತು ಪುರಸಭಾ ಮುಖ್ಯಾಧಿಕಾರಿಗೆ ಸೂಚಿಸಿದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಪುರಸಭಾ ಮುಖ್ಯಾಧಿಕಾರಿ ಶಿವಶಂಕರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.