ಚನ್ನರಾಯಪಟ್ಟಣ: ಸಮಾಜದ ಸರಿ ದಿಕ್ಕಿಗೆ ಶ್ರಮವಹಿಸುವ ಪತ್ರಕರ್ತರನ್ನೆಲ್ಲಾ ಒಂದೇಡೆ ಸೇರಿಸಿ ಅವರಿಗೆ ಸಿಂಧೂರವಿಟ್ಟು, ರಾಖಿ ಕಟ್ಟಿ, ಆರತಿ ಬೆಳಗಿ ಸಹೋದರತ್ವದ ಸಂಬಂಧ ಬಯಸಿ ರಕ್ಷಾ ಬಂಧನ ಆಚರಿಸುವ ಮೂಲಕ ಪಟ್ಟಣದ ಇನ್ನರ್‌ವೀಲ್ ಕ್ಲಬ್ ಮತ್ತು ಕಲಾ ಪರಿವಾರದ ಪದಾಧಿಕಾರಿಗಳು ಮತ್ತು ಸದಸ್ಯರು ವಿಶೇಷತೆ ಮೆರೆದರು.
ಪಟ್ಟಣದಲ್ಲಿ ಸಮಾಜಮುಖಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಇನ್ನರ್‌ವೀಲ್ ಕ್ಲಬ್ ಮತ್ತು ಕಲಾ ಪರಿವಾರದ ಚಿಂತನೆ ವಿಶೇಷವಾಗಿತ್ತು, ತಾಲ್ಲೂಕಿನ ಪತ್ರಕರ್ತರನ್ನೆಲ್ಲಾ ಪತ್ರಕರ್ತರ ಭವನಕ್ಕೆ ಆಹ್ವಾನಿಸಿ ಅವರಿಗೆ ಕ್ಲಬ್ ಮತ್ತು ಪರಿವಾರದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸೇರಿ ಸಹೋದರತ್ವದ ಸಂಬಂಧವಾಗಿರುವ ರಾಖಿ ಕಟ್ಟುವ ಕಾರ್ಯವನ್ನು ಪ್ರಪ್ರಥಮವಾಗಿ ರೂಪಿಸಿದ್ದು ವಿಶೇಷವಾಗಿತ್ತು. ತಾಲ್ಲೂಕಿನ ಪತ್ರಕರ್ತರನ್ನೆಲ್ಲಾ ಸಾಲಾಗಿ ಕೂರಿಸಿ, ಅವರ ಹಣೆಗೆ ಸಿಂಧೂರವಿಟ್ಟು, ರಾಖಿ ಕಟ್ಟಿ, ಪುಷ್ಪಾರ್ಚನೆ ಸಲ್ಲಿಸಿ, ಆರತಿ ಬೆಳಗಿ ವೃತ್ತಿಬದುಕು, ಇಷ್ಟಾರ್ಥ ಸಿದ್ದಿಸಲಿ ಎಂಬುದಾಗಿ ಶುಭ ಕೋರಿದರು.
ಈ ವೇಳೆ ಮಾತನಾಡಿದ ಕಲಾ ಪರಿವಾರದ ಮುಖ್ಯಸ್ಥೆ ಸುಶೀಲಾ ರಾಮರಾವ್ ಮಾತನಾಡಿ, ಎಲ್ಲರಲ್ಲಿ ಅಹಂಕಾರ, ಅಹಂ ಹೋಗಿ ಎಲ್ಲರೂ ಪ್ರೀತಿಯಿಂದ ಬದುಕಬೇಕು, ನಡೆಯಬೇಕು ಎಂಬುದಾಗಿ ಕಲಾ ಪರಿವಾರ ಹುಟ್ಟಿದೆ, ಎಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿ, ಕಲೆ, ಭಾಷೆಯನ್ನು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಆದರ ಮೊದಲ ಹಂತವಾಗಿ ಆಗಸ್ಟ್ ೧೫ರಂದು ಸಾಮೂಹಿಕ ಗಾಯನ ಮಾಡಿದ್ದು ನಮ್ಮೇಲ್ಲರಿಗೆ ದೇಶದ ಹಿರಿಮೆ, ಸಹೋದರತ್ವ ಹೆಚ್ಚಿಸಿದೆ. ಇದರ ಭಾಗವಾಗಿಯೇ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಸಹೋದರತ್ವ ಬಯಸಿ ನಮ್ಮೆಲ್ಲಾ ಸದಸ್ಯರ ಬಯಕೆಯಂತೆ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸುತ್ತಿದ್ದೇವೆ. ಇದೀಗ ಪತ್ರಕರ್ತರು ನಮ್ಮ ಅಣ್ಣತಮ್ಮಂದಿರಾಗಿರುವುದು ನಮಗೆ ಮತ್ತಷ್ಟು ಬಲ ಬಂದಿದೆ. ನಮ್ಮ ಸಮಸ್ಯೆಗೆ ನಿಲ್ಲುವವರ ಬಳಗ ಹೆಚ್ಚಾಯಿತ್ತು ಎಂಬ ಖುಷಿ ಇದೆ ಎಂದರು.
ಇನ್ನರ್‌ವೀಲ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಕುಸುಮಾ ಬಾಲಕೃಷ್ಣ ಮಾತನಾಡಿ, ಸಹೋದರ, ಸಹೋದರಿಯ ನಡುವೆ ಇರುವ ಆತ್ಮೀಯ ಸಂಬಂಧದ ಸಂಕೇತ ರಕ್ಷಾ ಬಂಧನ, ಇದನ್ನು ನಮ್ಮ ಊರಿನ ಪತ್ರಕರ್ತರ ಸಹೋದರತ್ವ ಬಯಸಿ ಅವರಿಗೆ ರಾಖಿ ಕಟ್ಟಿ, ಅವರಿಂದ ಅರ್ಶಿವಾದ ಪಡೆದಿದ್ದೇವೆ. ಅವರೆಲ್ಲಾ ದೀರ್ಘಾಯುಷಿಗಳಾಗಿ ವೃತ್ತಿಜೀವನ ಯಶಸ್ಸಿನಿಂದ ಕೂಡಿರಲಿ ಎಂಬುದಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಆಗಸ್ಟ್ ೧೫ರಂದು ಕ್ಲಬ್ ಮತ್ತು ಪರಿವಾರದ ನೂರಾರು ಮಂದಿ ಸೇರಿ ಮಾಡಿದ ಸಾಮೂಹಿಕ ಗಾಯನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು, ಆದು ಎಲ್ಲೆಡೆ ಮನೆಮಾತಾಗಲು ಪತ್ರಕರ್ತ ಸಹೋದರರು ಕಾರಣ. ಹುಟ್ಟು ಆಕಸ್ಮಿಕ, ಸಾವು ಖಚಿತ, ಇರುವ ದಿನಗಳಲ್ಲಿ ಉತ್ತಮ ಬದುಕು ನಮ್ಮದಾಗಲಿ ಎಂಬುದು ಎಲ್ಲರ ಆಶಯ, ಎಲ್ಲೆಡೆ ನಡೆಯುತ್ತಿರುವ ರಕ್ಷಾ ಬಂಧನದ ಉದ್ದೇಶ ಗೌರವ, ನಂಬಿಕೆ, ಮತ್ತು ಪ್ರೀತಿಯ ಭಾಂದವ್ಯವಾಗಿದೆ ಅದು ನಮ್ಮ ನಿಮ್ಮ ನಡುವೆ ಸದಾ ಇರಲಿ ಎಂದು ಆಶಿಸುತ್ತೇನೆ ಎಂದರು.
ಇನ್ನರ್ ಕ್ಲಬ್‌ನ ಅಧ್ಯಕ್ಷೆ ನೇತ್ರಾನವೀನ್ ಮಾತನಾಡಿ, ಇನ್ನರ್ ಕ್ಲಬ್ ಪಟ್ಟಣದಲ್ಲಿ ಆರಂಭವಾಗಿ ಎರಡು ವರ್ಷ ಕಳೆದಿದ್ದು, ಇದರ ಮೂಲ ಉದ್ದೇಶ ಸ್ನೇಹ ಮತ್ತು ಸೇವೆ, ರೋಟರಿ ಕ್ಲಬ್‌ನ ಮಾದರಿಯಂತೆ ಕರ್ತವ್ಯ ನಿರ್ವಹಿಸುತ್ತದೆ. ಬರೀ ಮಹಿಳೆಯರೇ ಸೇರಿರುವ ಕ್ಲಬ್ ಆಗಿದೆ. ಪತ್ರಕರ್ತರ ದಿನಾಚರಣೆಯಲ್ಲಿ ಬಹುತೇಕರು ಪತ್ರಕರ್ತರಿಗೆ ಶುಭಕೋರುತ್ತಾರೆ, ನಾವು ವಿಶೇಷವಾಗಿ ಪತ್ರಕರ್ತರೊಂದಿಗೆ ರಕ್ಷಾ ಬಂಧನ ಆಚರಿಸಿಕೊಂಡು ಅವರ ಸಹೋದರತ್ವ ಬಯಸಿ ಕಾರ್ಯಕ್ರಮ ರೂಪಿಸಿದ್ದೇವೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದು ಎಲ್ಲರಿಗೂ ಖುಷಿ ತಂದಿದೆ. ಇದನ್ನು ಪ್ರತಿವರ್ಷ ನಡೆಸಿಕೊಂಡು ಹೋಗುವ ಇಚ್ಛೆ ಹೊಂದಿದ್ದೇವೆ ಇದಕ್ಕಾಗಿ ಪತ್ರಕರ್ತರ ಸಹಕಾರದ ಅಗತ್ಯ ಕೋರಿದರು.
ಈ ಸಂದರ್ಭ ಇನ್ನರ್ ಕ್ಲಬ್ ಮತ್ತು ಕಲಾ ಪರಿವಾರದ ಪದಾಧಿಕಾರಿಗಳು, ಮತ್ತು ಸದಸ್ಯರುಗಳಾದ ತಾರಾರಮೇಶ್, ವನಜಾಕ್ಷಿ, ಬನಶಂಕರಿರಘು, ಪಷ್ಪಾ, ಅರ್ಚನಾ, ರಶ್ಮಿ, ರಾಜಶ್ರೀ, ನಾಗಶ್ರೀ ಕುಮಾರ್, ನಳಿನಾ ನಟರಾಜ್, ಮಂಜುಳಾ, ಸೇರಿ ಇತರರು ಇದ್ದರು.








