ಹಾಸನದಲ್ಲಿ ಜಮೀನು ವಿವಾದದ ಕಿಚ್ಚು: ಯುವ ರೈತನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ!

ಹಾಸನ (kannadapost.com): ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಯುವ ಕೃಷಿಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ತಾಲೂಕಿನ ರಾಮದೇವರಪುರ ಗ್ರಾಮದಲ್ಲಿ ನಡೆದಿದೆ.

​ಗ್ರಾಮದ ನಿವಾಸಿ ಪೃಥ್ವಿ (29) ಕೊಲೆಯಾದ ದುರ್ದೈವಿ. ಮೃತ ಪೃಥ್ವಿಗೆ ಮದುವೆಯಾಗಿದ್ದು, ಇಬ್ಬರು ಪುಟ್ಟ ಮಕ್ಕಳಿದ್ದಾರೆ.

​ಜಮೀನು ಸೇಲ್ ಅಗ್ರಿಮೆಂಟ್ ವಿವಾದವೇ ಕಾರಣ?

​ಪೃಥ್ವಿ ಕೆಲ ವರ್ಷಗಳ ಹಿಂದೆ ತನ್ನ ಜಮೀನನ್ನು ಸಂತೋಷ್ ಅಲಿಯಾಸ್ ಮೊಟ್ಟೆ ಸಂತೋಷ್ ಎಂಬಾತನಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದ ಎನ್ನಲಾಗಿದೆ. ಬಳಿಕ ಸಂತೋಷ್, ಆ ಜಮೀನನ್ನು ದಾಸರಕೊಪ್ಪಲು ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡುವುದಾಗಿ ಹೇಳಿ ಅವರಿಂದ ಅಡ್ವಾನ್ಸ್ ಹಣ ಪಡೆದಿದ್ದ.

​ಆದರೆ, ಇತ್ತೀಚೆಗೆ ಪೃಥ್ವಿ ಜಮೀನು ಮಾರಾಟ ಮಾಡಲು ನಿರಾಕರಿಸಿದ್ದ. “ನನ್ನ ಜಮೀನನ್ನು ನಾನು ಬೇರೆಯವರಿಗೆ ಮಾರಾಟ ಮಾಡುವುದಿಲ್ಲ. ರೇಟ್ ಎಷ್ಟು ಎಂದು ಹೇಳಿದರೆ ನಾನೇ ಪೂರ್ಣ ಹಣ ನೀಡಿ ನನ್ನ ಜಮೀನನ್ನು ಇಟ್ಟುಕೊಳ್ಳುತ್ತೇನೆ” ಎಂದು ಪೃಥ್ವಿ ಹೇಳಿದ್ದ ಎನ್ನಲಾಗಿದೆ. ಇದರಿಂದಾಗಿ ಸಂತೋಷ್ ಹಾಗೂ ಪೃಥ್ವಿ ನಡುವೆ ಜಗಳ ಶುರುವಾಗಿತ್ತು. ಸೇಲ್ ಅಗ್ರಿಮೆಂಟ್ ಪ್ರಕಾರವೇ ಜಮೀನು ರಿಜಿಸ್ಟರ್ ಮಾಡಿಕೊಡುವಂತೆ ಸಂತೋಷ್ ಪಟ್ಟು ಹಿಡಿದಿದ್ದ.

​ಸಂಧಾನಕ್ಕೆ ಕರೆದು ಕೃತ್ಯ?

​ಹತ್ಯೆ ನಡೆಯುವ ಮುನ್ನ ಸಂತೋಷ್, ಪೃಥ್ವಿಗೆ ಕರೆ ಮಾಡಿ “ಜಮೀನಿನ ಬಳಿ ಬಾ, ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ” ಎಂದು ಹೇಳಿದ್ದ. ಆದರೆ, ತನಗೆ ಮದ್ರಾಸ್ ಐ (ಕಣ್ಣಿನ ಸಮಸ್ಯೆ) ಆಗಿರುವ ಕಾರಣ ಊರಿನಲ್ಲೇ ಬಂದು ಮಾತನಾಡುವಂತೆ ಪೃಥ್ವಿ ತಿಳಿಸಿದ್ದ.

​ತನ್ನ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದ ಪೃಥ್ವಿ, ಸಂಜೆ ವೇಳೆಗೆ ಬೆಳೆ ಕಟಾವು ಮಾಡಿಸುತ್ತಿದ್ದ. ಬಳಿಕ ಮನೆಗೆ ತೆರಳಿ ಹಾಲು ಕರಿದು, ಜಾನುವಾರುಗಳಿಗೆ ಮೇವು ಹಾಕಿ, ಜಮೀನಿನಲ್ಲಿ ಬೆಳೆ ಮುಚ್ಚಲು ಟಾರ್ಪಲ್ ತರಲೆಂದು ರಾತ್ರಿ ವೇಳೆ ಬೈಕ್‌ನಲ್ಲಿ ಜಮೀನಿನ ಬಳಿಗೆ ತೆರಳಿದ್ದ.

​ಮಾರಕಾಸ್ತ್ರಗಳಿಂದ ಕೊಚ್ಚಿ ಎಸ್ಕೇಪ್

​ಪೃಥ್ವಿ ಜಮೀನಿಗೆ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಮನಬಂದಂತೆ ಹಲ್ಲೆ ನಡೆಸಿ, ಸ್ಥಳದಲ್ಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಮೃತ ಪೃಥ್ವಿಯ ಮೊಬೈಲ್ ಫೋನ್ ಹಾಗೂ ಆತ ಬಂದಿದ್ದ ಬೈಕ್‌ನೊಂದಿಗೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

​ಕುಟುಂಬಸ್ಥರ ಗಂಭೀರ ಆರೋಪ

​ಘಟನೆಯ ನಂತರ ಸಂತೋಷ್ ಹಾಗೂ ಆತನ ತಂದೆ ಪುಟ್ಟಸ್ವಾಮಿ ಅವರೇ ಈ ಕೊಲೆಯನ್ನು ಮಾಡಿದ್ದಾರೆ ಎಂದು ಪೃಥ್ವಿ ಕುಟುಂಬಸ್ಥರು ನೇರ ಆರೋಪ ಮಾಡಿದ್ದಾರೆ.

​ಮಾಹಿತಿ ತಿಳಿದ ತಕ್ಷಣ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.