ಹಾಸನಾಂಬ ಭಕ್ತರಿಗೆ ಗುಡ್ ನ್ಯೂಸ್: ಸಂಸದ ಶ್ರೇಯಸ್ ಪಟೇಲ್ ಮನವಿಗೆ ಸ್ಪಂದನೆ, 2 ವಿಶೇಷ ರೈಲುಗಳ ಸೇವೆ ಆರಂಭ

ಹಾಸನ (kannadapost.com): ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ವಿಶ್ವವಿಖ್ಯಾತ ಹಾಸನದ ಶ್ರೀ ಹಾಸನಾಂಬ ದೇಗುಲದ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ. ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಶ್ರೇಯಸ್ ಎಂ. ಪಟೇಲ್ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವಾಲಯ, ಹಾಸನಾಂಬ ಮಹೋತ್ಸವದ ನಿಮಿತ್ತ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ಅನುಮೋದನೆ ನೀಡಿದೆ.

​ಈ ಕುರಿತು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಸಂಸದ ಶ್ರೇಯಸ್ ಎಂ. ಪಟೇಲ್ ಮನವಿ ಪತ್ರ ಸಲ್ಲಿಸಿದ್ದರು. ಸಂಸದರ ಮನವಿಯನ್ನು ಪುರಸ್ಕರಿಸಿರುವ ನೈಋತ್ಯ ರೈಲ್ವೆ, ಉತ್ಸವದ ಅವಧಿಯಲ್ಲಿ ಭಕ್ತರ ಸುಗಮ ಪ್ರಯಾಣಕ್ಕಾಗಿ ಬೆಂಗಳೂರು–ಹಾಸನ–ಬೆಂಗಳೂರು ಹಾಗೂ ಅರಸೀಕೆರೆ–ಹಾಸನ–ಅರಸೀಕೆರೆ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ಕ್ರಮ ಕೈಗೊಂಡಿದೆ.

​ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ವಿವರ:

​1. ಬೆಂಗಳೂರು – ಹಾಸನ – ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (ರೈಲು ಸಂಖ್ಯೆ: 06573/06574)

  • ​ಸಂಚಾರದ ಅವಧಿ: ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಪ್ರತಿದಿನ ಸಂಚಾರ (ಪ್ರತಿ ದಿಕ್ಕಿನಲ್ಲಿ 14 ಟ್ರಿಪ್‌ಗಳು).
  • ​ಬೆಂಗಳೂರು ನಿರ್ಗಮನ: ಬೆಳಿಗ್ಗೆ 7:30
  • ​ಹಾಸನ ತಲುಪುವ ಸಮಯ: ಬೆಳಿಗ್ಗೆ 11:30
  • ​ಹಾಸನದಿಂದ ಮರುಪ್ರಯಾಣ: ಮಧ್ಯಾಹ್ನ 3:15
  • ​ಬೆಂಗಳೂರು ತಲುಪುವ ಸಮಯ: ಸಂಜೆ 7:00
  • ​ನಿಲುಗಡೆ ನಿಲ್ದಾಣಗಳು: ಯಶವಂತಪುರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿ.ಜಿ. ನಗರ, ಶ್ರವಣಬೆಳಗೊಳ ಹಾಗೂ ಚನ್ನರಾಯಪಟ್ಟಣ.

​2. ಅರಸೀಕೆರೆ – ಹಾಸನ – ಅರಸೀಕೆರೆ ಮೆಮು (MEMU) ವಿಶೇಷ ರೈಲು (ರೈಲು ಸಂಖ್ಯೆ: 06291/06292)

  • ​ಸಂಚಾರದ ಅವಧಿ: ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ (ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಚಾರ).
  • ​ಅರಸೀಕೆರೆ ನಿರ್ಗಮನ: ಬೆಳಿಗ್ಗೆ 11:30
  • ​ಹಾಸನ ತಲುಪುವ ಸಮಯ: ಮಧ್ಯಾಹ್ನ 12:30
  • ​ಹಾಸನದಿಂದ ಮರುಪ್ರಯಾಣ: ಮಧ್ಯಾಹ್ನ 12:45
  • ​ಅರಸೀಕೆರೆ ತಲುಪುವ ಸಮಯ: ಮಧ್ಯಾಹ್ನ 2:00
  • ​ನಿಲುಗಡೆ ನಿಲ್ದಾಣಗಳು: ಹಬ್ಬನಘಟ್ಟ ಮತ್ತು ಬಾಗೇಶಪುರ.

​ಕೇಂದ್ರ ಸಚಿವರು ಹಾಗೂ ರೈಲ್ವೆ ಇಲಾಖೆಗೆ ಸಂಸದರ ಧನ್ಯವಾದ

​ವಿಶೇಷ ರೈಲುಗಳ ಮಂಜೂರಾತಿ ಕುರಿತು ಹರ್ಷ ವ್ಯಕ್ತಪಡಿಸಿರುವ ಸಂಸದ ಶ್ರೇಯಸ್ ಎಂ. ಪಟೇಲ್:

​“ಹಾಸನಾಂಬ ಮಹೋತ್ಸವವು ನಮ್ಮ ಜಿಲ್ಲೆಯ ಅತ್ಯಂತ ಪವಿತ್ರ ಹಾಗೂ ಪ್ರಮುಖ ಧಾರ್ಮಿಕ ಉತ್ಸವವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಕಲ್ಪಿಸಬೇಕೆಂದು ಕೇಂದ್ರ ಸಚಿವರಲ್ಲಿ ವಿನಂತಿಸಿದ್ದೆ. ನನ್ನ ಮನವಿಗೆ ತಕ್ಷಣ ಸ್ಪಂದಿಸಿ ರೈಲು ಸೇವೆ ಒದಗಿಸಿರುವ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ, ನೈಋತ್ಯ ರೈಲ್ವೆ ಮಹಾಪ್ರಬಂಧಕರು, ಮೈಸೂರು ಡಿಆರ್‌ಎಂ (DRM) ಹಾಗೂ ಸಮಸ್ತ ರೈಲ್ವೆ ಸಿಬ್ಬಂದಿಗೆ ಹಾಸನ ಜಿಲ್ಲೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಾರ್ವಜನಿಕರು ಮತ್ತು ಭಕ್ತಾದಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದ್ದಾರೆ.