12.7 C
Munich
Home News ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿ ಹರ್ ಘರ್ ತಿರಂಗಾ ಜಾಗೃತಿ ಜಾಥಾ

ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿ ಹರ್ ಘರ್ ತಿರಂಗಾ ಜಾಗೃತಿ ಜಾಥಾ

ಚನ್ನರಾಯಪಟ್ಟಣ: ಹರ್ ಘರ್ ತಿರಂಗಾ ಎಂಬುದು ಭಾರತ ಸರ್ಕಾರದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆಸುವ ರಾಷ್ಟ್ರೀಯ ಹಬ್ಬವಾಗಿದ್ದು, ಈ ಅಭಿಯಾನದ ಉದ್ದೇಶ ದೇಶದ ಪ್ರತಿಯೊಂದು ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಭಕ್ತಿಯನ್ನು ಹೆಚ್ಚಿಸಿ, ಧ್ವಜದ ಗೌರವವನ್ನು ಜನಮಾನಸದಲ್ಲಿ ಗಟ್ಟಿಗೊಳಿಸುವುದಾಗಿದೆ ಎಂದು ಕೇಂದ್ರ ಪುರಾತತ್ವ ಇಲಾಖೆಯ ಹಾಸನ ಉಪ ವಿಭಾಗದ ಪುರಾತತ್ವ ಸಂರಕ್ಷಣಾಧಿಕಾರಿ ಸುನಿಲ್ ಕುಮಾರ್ ಹೇಳಿದರು.

ತಾಲ್ಲೂಕಿನ ಜೈನಕಾಶಿ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮಹಾದ್ವಾರದಲ್ಲಿ ಪುರಾತತ್ವ ಇಲಾಖೆ ಹಾಗೂ ಅಂಬಿಕಾ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಹರ್ ಘರ್ ತಿರಂಗಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕಾರ್ಯಕ್ರಮದಿಂದ ನಮ್ಮ ತ್ರಿವರ್ಣ ಧ್ವಜದ ಮಹತ್ವ ಮತ್ತು ಅದರ ಇತಿಹಾಸವನ್ನು ಜನರಿಗೆ ಪರಿಚಯಿಸುವುದಾಗಿದೆ. ರಾಷ್ಟ್ರೀಯ ಏಕತೆಯನ್ನು ಬಲಪಡಿಸಿ, ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವುದರೊಂದಿಗೆ ನಾಡು-ನುಡಿಗೆ ಗೌರವ ನೀಡಿ ಪ್ರತಿ ನಾಗರಿಕನ ಮನಸ್ಸಿನಲ್ಲಿ ರಾಷ್ಟ್ರಭಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಅಂಬಿಕಾ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕುಮಾರ್ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನದ ಮಹತ್ವವನ್ನು ವಿವರಿಸಿದರು.ವಿಂಧ್ಯಗಿರಿ ಮಹಾದ್ವಾರದಿಂದ ಜಾಥಾ ಪ್ರಾರಂಭವಾಗಿ ಶ್ರೀಮಠದ ಬೀದಿ, ಬೆಂಗಳೂರು ರಸ್ತೆ ಮೂಲಕ ಚಂದ್ರಗಿರಿ ಬೆಟ್ಟದ ಮಹಾದ್ವಾರದ ವರೆಗೆ ಸಾಗಿತು. ಎಲ್ಲರೂ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು “ವಂದೇ ಮಾತರಂ”, “ಭಾರತ ಮಾತಾ ಕೀ ಜಯ” ಎಂಬ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ಸಾಗಿದರು.

ಕಾರ್ಯಕ್ರಮದಲ್ಲಿ ಪುರಾತತ್ವ ಇಲಾಖೆ ಸಿಬ್ಬಂದಿಗಳಾದ ಶ್ರೀನಿವಾಸ್, ಪ್ರಿಯಾಂಶು ದೀಕ್ಷಿತ್, ಸುರೇಂದ್ರ, ಮುರುಳಿ, ಜ್ಞಾನೇಶ್, ಪ್ರವಾಸಿ ಮಿತ್ರರಾದ ಮಣಿಕಂಠ, ಕೃಷ್ಣಮೂರ್ತಿ, ಅಮಿತ್, ರಾಜಣ್ಣ ಮುಂತಾದವರಿದ್ದರು.

error: Content is protected !!