10.3 C
Munich
Home News “ಮಲೆನಾಡು ಕರ್ನಾಟಕ” ಘೋಷಿಸಿ ವಿಶೇಷ ಪ್ಯಾಕೇಜ್ ನೀಡಲಿ – ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ

“ಮಲೆನಾಡು ಕರ್ನಾಟಕ” ಘೋಷಿಸಿ ವಿಶೇಷ ಪ್ಯಾಕೇಜ್ ನೀಡಲಿ – ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ

ಸಕಲೇಶಪುರ : ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗಿ ಘೋಷಿಸಿ ವಿಶೇಷ ಪ್ಯಾಕೇಜ್ ನೀಡಿದಂತೆ, ಮಳೆನಾಡು ಪ್ರದೇಶವನ್ನೂ ಮಲೆನಾಡು ಕರ್ನಾಟಕವೆಂದು ಘೋಷಿಸಿ ಸರ್ಕಾರ ತಕ್ಷಣವೇ ವಿಶೇಷ ಅನುದಾನ ನೀಡಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಆಗ್ರಹಿಸಿದರು.

ಪಟ್ಟಣದ ಹೇಮಾವತಿ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಸುಮಾರು ೩೦೦ ಟಿ ಎಂ ಸಿ ನೀರು ಹರಿದು ಹೋಗಿದೆ. ಈ ಅವಧಿಯಲ್ಲಿ ಸಕಲೇಶಪುರ ಸೇರಿದಂತೆ ಮಲೆನಾಡು ಪ್ರದೇಶವು ಅಪಾರ ನಷ್ಟವನ್ನು ಅನುಭವಿಸಿದೆ. ನೀರಿನ ಲಾಭವನ್ನು ಇತರೆ ಭಾಗದ ಜನರು ಪಡೆಯುತ್ತಿರುವರೆ, ನಷ್ಟವನ್ನು ಮಾತ್ರ ಮಲೆನಾಡು ಜನತೆ ಭರಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಳೆದ ೧೬ ವರ್ಷಗಳಿಂದಲೂ ಮಲೆನಾಡಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದೇನೆ. ಆದರೆ ಆಳುತ್ತಿರುವ ಸರ್ಕಾರಗಳು ಜಾಣ ಕುರುಡುತನ ತೋರಿಸುತ್ತಿವೆ. ಏಳು ಜಿಲ್ಲೆಗಳ ಮಳೆನಾಡು ಭಾಗವನ್ನು ಮಲೆನಾಡು ಕರ್ನಾಟಕವೆಂದು ಘೋಷಿಸಿ, ವಿಶೇಷ ಪ್ಯಾಕೇಜ್ ನೀಡುವುದು ಕಾಲದ ಅವಶ್ಯಕತೆ ಎಂದು ಅವರು ಹೇಳಿದರು.

ಅರಣ್ಯ ಕಾಯ್ದೆಯ ಪರಿಣಾಮವಾಗಿ ನೂರಾರು ವರ್ಷಗಳಿಂದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ರೈತರು, ಬೆಳಗಾರರು, ಬಡವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ಜೀವನಾಧಾರವಾದ ಭೂಮಿ ಅವರದ್ದೇ ಆಗಬೇಕು. ನ್ಯಾಯಾಲಯವೂ ಇದನ್ನು ಒಪ್ಪುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜನರನ್ನು ಒಕ್ಕಲಿಸಲು ಮುಂದಾಗಬಾರದು. ಮಾನವೀಯ ದೃಷ್ಟಿಯಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇತ್ತೀಚಿನ ಮಳೆಯಿಂದಾಗಿ ಕಾಫಿ ಬೆಳಗಾರರು ಅಪಾರ ನಷ್ಟಕ್ಕೆ ಒಳಗಾಗಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಉತ್ತಮವಾಗಿದ್ದರೂ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಇಳುವರಿ ಕುಸಿತ ಕಂಡು ಬೆಳಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ನೆರವಿಗೆ ಸರಕಾರ ಬಂದು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚಂಚಲಕುಮಾರ ಸ್ವಾಮಿ, ಮಾಜಿ ಅಧ್ಯಕ್ಷ ಆದರ್ಶ್ ಮುಖೇಶ್ ಶೆಟ್ಟಿ, ಉಪಾಧ್ಯಕ್ಷೆ ಸರಿತಾ ಬೆಬಿತ ಶೆಟ್ಟಿ, ಸದಸ್ಯರಾದ ಉಮೇಶ್, ಪ್ರಜ್ವಲ್, ತಂಗ ಇಸ್ರಾರ್ ಹಾಗೂ ಪಕ್ಷದ ಮುಖಂಡರಾದ ಜಾತಹಳ್ಳಿ ಪುಟ್ಟಸ್ವಾಮಿಗೌಡ, ಸಚಿನ್ ಪ್ರಸಾದ್, ಕರಗೂರು ರಮೇಶ್, ಸುರೇಶ್ ಆಳ್ವ, ವಳಲಹಳ್ಳಿ ಪ್ರಸಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!