ಹಾಸನ: ಮದುವೆ ವಿರೋಧಿಸಿ ಪ್ರಿಯಕರನ ಮನೆ ಸೇರಿದ ಯುವತಿ| ಮಗಳನ್ನು ಮನೆಗೆ ಕರೆತರಲು ಹೋದ ಅಪ್ಪ ಚಾಕು ಇರಿತಕ್ಕೆ ಬಲಿ!

father who had come to pick up his daughter from her lover's house was murdered

ಹಾಸನ: ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ನಿಗದಿ ಮಾಡಲು ಯತ್ನಿಸಿದ ತಂದೆಯ ನಿರ್ಧಾರ ವಿರೋಧಿಸಿ ತಾನು ವಿವಾಹವಾಗಲು ಬಯಸಿದ್ದ ಸಂಬಂಧಿಯೇ ಆಗಿರುವ ಪ್ರಿಯಕರನ ಮನೆ ಸೇರಿದ್ದ ಮಗಳನ್ನು‌ ಕರೆದೊಯ್ಯಲು ಬಂದ ತಂದೆ ಸಂಬಂಧಿಯಿಂದಲೇ ಹತ್ಯೆಯಾಗಿರುವ ಘಟನೆ ಬೇಲೂರು ತಾಲೂಕಿನ ಬೆಳ್ಳಾವರದಲ್ಲಿ ನಡೆದಿದೆ.

ಮೃತರನ್ನು ಅನಿಲ್ (46) ಅವರನ್ನು ಸಂಬಂಧಿಯೇ ಆಗಿರುವ ರಾಜೇಶ್ (30) ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಅನಿಲ್ ಅವರ ಪುತ್ರಿ ಅನಿಷಾ ಕೆಲ ಸಮಯದಿಂದ ರಾಜೇಶ್ ಅವರ ಮನೆಯಲ್ಲಿದ್ದಳು. ಈ ಹಿಂದೆ ಅನಿಷಾಳ ಮದುವೆಯನ್ನು ರಾಜೇಶ್ ಜತೆ ನಡೆಸುವ ಕುರಿತು ಕುಟುಂಬದವರ ನಡುವೆ ಮಾತುಕತೆ ನಡೆದಿದ್ದರೂ, ಆ ವೇಳೆ ಅನಿಷಾ ಅಪ್ರಾಪ್ತಳಾಗಿದ್ದಳು.

ಇತ್ತೀಚೆಗೆ ಅನಿಷಾಗೆ 18 ವರ್ಷ ತುಂಬಿದ ಹಿನ್ನೆಲೆ, ಅನಿಲ್ ಅವರು ಮಗಳನ್ನು ಬೇರೆ ಯುವಕನ ಜತೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದರಿಂದ ಅಸಮಾಧಾನಗೊಂಡ ಅನಿಷಾ ರಾಜೇಶ್ ಮನೆಗೆ ತೆರಳಿದ್ದಳು.

ಗುರುವಾರ ರಾತ್ರಿ ಮಗಳನ್ನು ಕರೆತರಲು ಅನಿಲ್ ಅವರು ಬೆಳ್ಳಾವರ ಗ್ರಾಮದಲ್ಲಿರುವ ರಾಜೇಶ್ ಮನೆಗೆ ತೆರಳಿದ್ದು, ಈ ವೇಳೆ ತಂದೆಯ ಜತೆ ಬರಲು ನಿರಾಕರಿಸಿದ ಅನಿಷಾ ಮತ್ತು ಅನಿಲ್ ನಡುವೆ ಜಗಳ ನಡೆದಿದೆ. ಈ ವೇಳೆ ರಾಜೇಶ್ ಮಧ್ಯ ಪ್ರವೇಶಿಸಿದ್ದಾನೆ. ಈ ಸಂದರ್ಭದಲ್ಲಿ ಅನಿಲ್ ಚಾಕುವಿನಿಂದ ರಾಜೇಶ್ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ. ತಕ್ಷಣವೇ ಅದೇ ಚಾಕುವನ್ನು ಕಿತ್ತುಕೊಂಡ ರಾಜೇಶ್, ಅನಿಲ್‌ಗೆ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡ ಅನಿಲ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಅರೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.