ಚನ್ನರಾಯಪಟ್ಟಣ: ಹಾಸನ ರಾಯಲ್ ಅಪೋಲೊ ಸ್ಕೂಲ್ ನಲ್ಲಿ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆ ವತಿಯಿಂದ ಇತ್ತೀಚೆಗೆ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಪಟ್ಟಣದ ಜ್ಞಾನಸಾಗರ ಶಾಲೆಯ ವಿದ್ಯಾರ್ಥಿ ರೋಹನ್ ಅವರಿಗೆ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.
ನಂತರ ಸಂಸ್ಥೆಯ ಅಧ್ಯಕ್ಷ ಡಾ. ಕೆ. ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಿದರೆ ಓದುತ್ತಿರುವ ಶಾಲೆಗಷ್ಟೇ ಅಲ್ಲದೆ ಹುಟ್ಟಿದ ಊರಿಗೂ ಹಾಗೂ ಹೆತ್ತವರಿಗೂ ಕೀರ್ತಿ ಸಿಗಲಿದೆ ಎಂದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅತಿಮುಖ್ಯ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಉತ್ತಮ ವೇದಿಕೆ ಕಲ್ಪಿಸುವುದು ಶಾಲೆ ಹಾಗೂ ಶಿಕ್ಷಕರ ಜವಾಬ್ದಾರಿಯುತ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸ್ಪರ್ಧೆ ಯಾವುದೇ ಇರಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಸೋಲು ಹಾಗೂ ಗೆಲುವು ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗೆಲುವಿನಿಂದ ಬಹುಮಾನ ಸಿಕ್ಕರೆ ಸೋಲು ನೂರಾರು ಅನುಭವಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯಾವುದೇ ಒಂದು ಶಿಕ್ಷಣ ಸಂಸ್ಥೆಯು ಕೇವಲ ಗಳಿಕೆಗಾಗಿ ಶಾಲೆ ಪ್ರಾರಂಭಿಸುವುದಿಲ್ಲ. ಬದಲಿಗೆ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಕಲ್ಪಿಸುವುದರ ಜೊತೆಗೆ ಕ್ರೀಡೆ, ಸಾಹಿತ್ಯ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪರಿಚಯಿಸುತ್ತ ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ 5 ಸಾವಿರ ರೂ. ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ಪಡೆದು ಶಾಲೆಗೆ ಒಳ್ಳೆಯ ಹೆಸರು ಹಾಗೂ ಕೀರ್ತಿ ತಂದಿರುವ ವಿದ್ಯಾರ್ಥಿ ರೋಹನ್ ಅವರ ಸಾಧನೆ ಹಾಗೂ ಪರಿಶ್ರಮವು ಮುಂದಿನ ಭವಿಷ್ಯಕ್ಕೆ ಮೆಟ್ಟಿಲು ಆಗಲಿದೆ ಎಂದು ಶ್ಲಾಘಿಸಿದರು.
ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಾ. ಭಾರತಿ ನಾಗೇಶ್, ಡೀನ್ ಡಾ. ಸುಜಾ ಫಿಲಿಪ್, ಆಡಳಿತಾಧಿಕಾರಿ ಫಿಲಿಪ್.ಸಿ.ಪಿ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.










