ಅರಸೀಕೆರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವಶಪಡಿಸಿಕೊಂಡಿರುವ ಭೂ ಪರಿಹಾರ ನಿಗದಿಯಲ್ಲಿ ಅನ್ಯಾಯ ಆರೋಪ: ಬೆಂಡೆಕೆರೆಯಲ್ಲಿ ರೈತರ ಭಾರೀ ಪ್ರತಿಭಟನೆ- ಸಂತ್ರಸ್ತರ ಮನೆಯಲ್ಲಿ ಅರಿಶಿಣ-ಕುಂಕುಮ ಪಡೆದು ಮನಗೆದ್ದ ಡಿಸಿ

Farmers, who alleged that there was injustice in the compensation price determination during the land acquisition process for National Highway 206, which passes through Bendekere, expressed strong opposition to the actions of the National Highways Authority officials in acquiring the land.

ಅರಸೀಕೆರೆ: ತಾಲೂಕಿನ ಬೆಂಡೆಕೆರೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಭೂ ಸ್ವಾಧೀನದ ವೇಳೆ ಪರಿಹಾರ ದರ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದ ರೈತರು, ಭೂಮಿ ಸ್ವಾಧೀನಕ್ಕೆ ಪಡೆಯುವ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಧಿಕಾರಿಗಳ ನಡೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

ಮನೆ ಮತ್ತು ಜಮೀನು ವಶಕ್ಕೆ ಪಡೆಯುವ ಮೊದಲು ಯಾವುದೇ ಮುನ್ಸೂಚನೆ ನೀಡದೆ, ಜಿಲ್ಲಾಡಳಿತ ಇಂದು ಜೆಸಿಬಿ ಯಂತ್ರದ ಸಹಾಯದಿಂದ ಕಾಮಗಾರಿ ಪ್ರಾರಂಭಿಸಲು ಯತ್ನಿಸಿದ್ದು, ಅದಕ್ಕೆ ವಿರೋಧವಾಗಿ ಗ್ರಾಮಸ್ಥರು ರಸ್ತೆಯ ಮಧ್ಯೆ ಮಲಗಿ ತೀವ್ರ ಪ್ರತಿಭಟನೆ ನಡೆಸಿದರು.

ಘಟನಾ ಸ್ಥಳಕ್ಕೆ ಸುಮಾರು 500ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿತ್ತು. ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಶಮನಗೊಳಿಸಿದರು.

ಡಿ.ಸಿ. ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಅವರಿಂದ ಮಾಹಿತಿಯನ್ನು ಸಂಗ್ರಹಿಸಿ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಅವರು ಪ್ರತಿಭಟನಾ ನಿರತ ರೈತರಿಗೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವಂತೆ ಸೂಚನೆ ನೀಡಿ, ಸಂಬಂಧಪಟ್ಟ ದಾಖಲೆಗಳನ್ನು ತರಲು ಸೂಚನೆ ನೀಡಿದರು.

ಜತೆಗೆ ಪಹಣಿಯಲ್ಲಿ ಆಗಿರುವ ದೋಷವನ್ನು ಎರಡು ವಾರಗಳಲ್ಲಿ ಸರಿಪಡಿಸಲು ತಾಲೂಕು ದಂಡಾಧಿಕಾರಿಗೆ ನಿರ್ದೇಶನ ನೀಡಿದರು.

ಡಿ.ಸಿ ಅವರು ಸಮೀಪದಲ್ಲಿನ ಯೋಜನೆಯ ಸಂತ್ರಸ್ತ ರೈತರ ಮನೆಗೆ ಭೇಟಿ ನೀಡಿ, ಹಾಲು ಕುಡಿದು ಅರಿಶಿನ-ಕುಂಕುಮ ಪಡೆದು ರೈತರ ವಿಶ್ವಾಸ ಗೆದ್ದರು.

ಸಂತ್ರಸ್ತರ ಮನೆಯ ಅರಿಶಿಣ ಕುಂಕುಮ ಸ್ವೀಕರಿಸಿದ ಡಿಸಿ

ಅದೇ ಸಂದರ್ಭದಲ್ಲಿ, ಪ್ರತಿಭಟನೆ ಸ್ಥಳದಲ್ಲಿ ಹಾಜರಿದ್ದ ಯೋಜನಾ ಸಂತ್ರಸ್ತನ ಅಂಗವಿಕಲ ತಾಯಿಗೆ ₹2000 ರೂ. ಅಂಗವಿಕಲರ ವೇತನ ನೀಡುವಂತೆ ತಕ್ಷಣ ಆದೇಶ ಹೊರಡಿಸಿದರು.

ರೈತರು ತಮ್ಮ ಬೇಡಿಕೆಯಾಗಿ, ಜಾಜೂರು ಗ್ರಾಮದಲ್ಲಿ ನೀಡಿದ ಪರಿಹಾರವನ್ನೇ ಬೆಂಡೆಕೆರೆಯ ರೈತರ ಭೂಮಿಗೂ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಡಿ.ಸಿ ಅವರು ಸ್ಪಷ್ಟ ಸೂಚನೆ ನೀಡಿದ್ದು — “ಸರ್ಕಾರಿ ಜಾಗ ಹೊರತುಪಡಿಸಿ ರೈತರ ಭೂಮಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು” ಎಂದು ಆದೇಶಿಸಿದರು.

ಈ ಪ್ರತಿಭಟನೆಯಿಂದ ಬೆಂಡೆಕೆರೆಯಲ್ಲಿ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.