ಹಾಸನ: ನಗರದಲ್ಲಿ ಡಿ.6ರಂದು ಆಯೋಜನೆಯಾಗಿರುವ ಫಲಾನುಭವಿಗಳ ಸಮಾವೇಶ ಸಂಬಂಧ ಇಂದು ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಸ್ಪಷ್ಟ ನಿರ್ದೇಶನಗಳನ್ನು ನೀಡಿದರು.
“ಕಾರ್ಯಕ್ರಮಗಳ ಹೆಸರಿನಲ್ಲಿ ದುಂದು ವೆಚ್ಚ ಮಾಡಬಾರದು, ಸಮಯ ವ್ಯರ್ಥಗೊಳಿಸಬಾರದು. ಫಲಾನುಭವಿಗಳು ಬಂದಾಗ ಅವರ ಕೈಗೆ ಹಕ್ಕುಪತ್ರ–ಕ್ರಯಪತ್ರ–ಇ-ಸ್ವತ್ತು ಸೇರಿದಂತೆ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ತಲುಪಬೇಕು,” ಎಂದು ಅವರು ತಾಕೀತು ಮಾಡಿದರು.
ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಪ್ರಸ್ತುತ ವ್ಯವಸ್ಥೆಗಳು, ಫಲಾನುಭವಿಗಳ ಸಾಗಾಣಿಕೆ, ದಾಖಲೆ ಸಿದ್ಧತೆ, ಆಹಾರ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಚಿವರು ಒಂದರ ನಂತರ ಒಂದು ಸ್ಪಷ್ಟ ಸೂಚನೆಗಳನ್ನು ನೀಡಿದರು.
ಸಚಿವರ ಪ್ರಮುಖ ಸೂಚನೆಗಳು:
ಕಾರ್ಯಕ್ರಮದ ಹೆಸರಿನಲ್ಲಿ ಅತಿಯಾದ ಖರ್ಚು ಹಾಗೂ ಸಮಯದ ವ್ಯರ್ಥ ತಪ್ಪಿಸಬೇಕು.
ಬರುವ ಪ್ರತಿಯೊಬ್ಬ ಫಲಾನುಭವಿಗೂ ಹಕ್ಕುಪತ್ರ, ಕ್ರಯಪತ್ರ ಮತ್ತು ಇ-ಸ್ವತ್ತು ಕಡ್ಡಾಯವಾಗಿ ನೀಡಬೇಕು.
ಈಗಿನಿಂದಲೇ ಅಗತ್ಯ ಎಲ್ಲಾ ದಾಖಲೆಗಳನ್ನು ಪೂರ್ಣಗೊಳಿಸುವ ಕೆಲಸ ಕೈಗೊಳ್ಳಬೇಕು.
ಹಿಂದಿನ ಸರ್ಕಾರದ ಅವಧಿಯಲ್ಲಿ 94C ಮತ್ತು 94D ಅಡಿಯಲ್ಲಿ 2.50 ಲಕ್ಷ ಹಕ್ಕುಪತ್ರ ನೀಡಿದರೂ, ಕೆವಲ 10,600 ಮಾತ್ರ ಇ-ಸ್ವತ್ತು ಆಗಿರುವುದನ್ನು ಸಚಿವರು ಗಂಭೀರವಾಗಿ ತೆಗೆದುಕೊಂಡರು.
ನಾಮಕಾವಸ್ತೆ ಹಕ್ಕುಪತ್ರ ನೀಡುವ ಪದ್ಧತಿ ತಕ್ಷಣ ನಿಲ್ಲಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲೇ ಇ-ಸ್ವತ್ತು ಕಡ್ಡಾಯ.
ಫೌತಿಖಾತೆ ಆಂದೋಲನ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು; ಮೃತರ ಹೆಸರಿನ ದಾಖಲೆಗಳನ್ನು ವಾರಸುದಾರರ ಹೆಸರಿಗೆ ಬದಲಿಸುವುದು ಕಡ್ಡಾಯ.
ಜಿಪಂ–ತಾಪಂ ಹಾಗೂ ಜಿಪಂ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು.
ಫಲಾನುಭವಿಗಳು ಸುರಕ್ಷಿತವಾಗಿ ಮನೆಗೆ ತಲುಪುವುದು ಸಹ ಸರ್ಕಾರದ ಕರ್ತವ್ಯ ಎಂದು ಸಚಿವರು ಹೇಳಿದ್ದಾರೆ.
ಬಸ್ ಗಳ ಜೊತೆಗೆ ಅಗತ್ಯವಿದ್ದರೆ ಬೇರೆ ವಾಹನಗಳನ್ನೂ ವ್ಯವಸ್ಥೆ ಮಾಡಬೇಕು.
ಕಾರ್ಯಕ್ರಮವನ್ನು ಬೆಳಗ್ಗೆ 11 ಗಂಟೆಗೆ ಆರಂಭಿಸಿ, ಮಧ್ಯಾಹ್ನ 2.30ರೊಳಗೆ ಮುಗಿಸಬೇಕು.
ಆಗಮಿಸುವವರಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು.
ವಿಎ–ಪಿಡಿಓಗಳು ತಾವು ಕರೆತಂದ ಫಲಾನುಭವಿಗಳೊಂದಿಗೆ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಬೇಕು ಮತ್ತು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿ ನೋಡಿಕೊಳ್ಳಬೇಕು. ಹೋಗುವಾಗ ಅವರ ಎಲ್ಲಾ ದಾಖಲೆಗಳು ಅವರ ಕೈಯಲ್ಲಿರುವುದು ಖಚಿತಪಡಿಸಬೇಕು.










