4.5 C
Munich
Home News ಚನ್ನರಾಯಪಟ್ಟಣ: ಕುಂದೂರು ಶ್ರೀ ಸುಬ್ರಹ್ಮಣ್ಯ ಷಷ್ಟಿ ಜಾತ್ರೆ- ಅಹಂಕಾರ, ದ್ವೇಷ ತ್ಯಜಿಸಿ: ಚುಂಚಶ್ರೀ ಆಶೀರ್ವಚನ

ಚನ್ನರಾಯಪಟ್ಟಣ: ಕುಂದೂರು ಶ್ರೀ ಸುಬ್ರಹ್ಮಣ್ಯ ಷಷ್ಟಿ ಜಾತ್ರೆ- ಅಹಂಕಾರ, ದ್ವೇಷ ತ್ಯಜಿಸಿ: ಚುಂಚಶ್ರೀ ಆಶೀರ್ವಚನ

Sri Dr. Nirmalanda Nath Swamiji, the head of the Adichunchanagiri Mahasamsthan Math, gave a message to the devotees that ignorance, arrogance and hatred should be abandoned to become a better person.

ಚನ್ನರಾಯಪಟ್ಟಣ: ಉತ್ತಮ ವ್ಯಕ್ತಿಯಾಗಲು ಅಜ್ಞಾನ, ಅಹಂಕಾರ ಹಾಗೂ ದ್ವೇಷಗಳನ್ನು ತ್ಯಜಿಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ನಿರ್ಮಲನಂದನಾಥ ಸ್ವಾಮೀಜಿ ಭಕ್ತಸಮೂಹಕ್ಕೆ ಸಂದೇಶ ನೀಡಿದರು.

ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ, ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೊಳೆದಾಗ ವ್ಯಕ್ತಿತ್ವ ಉತ್ತಮಗೊಳ್ಳುತ್ತದೆ ಎಂದು ಆಶಿರ್ವಚನ ನೀಡಿದರು.

ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.

ಕರ್ಮ, ಭಕ್ತಿ ಮತ್ತು ಜ್ಞಾನವಿದ್ದಲ್ಲಿ ವ್ಯಕ್ತಿಯಾದವನು ಶಕ್ತಿಯಾಗಿ ಪರಿಣಮಿಸುತ್ತಾನೆ. ದೇವತಾಕಾರ್ಯಗಳ ಆಚರಣೆಯೊಂದಿಗೆ ಗುರು ಹಿರಿಯರನ್ನು ಭಕ್ತಿಭಾವದಿಂದ ಕಾಣುವುದರಿಂದ ಶ್ರದ್ಧೆಯುಂಟಾಗುತ್ತದೆ. ಶ್ರದ್ಧೆಯಿಂದ ಜ್ಞಾನ ಲಭಿಸುತ್ತದೆ. ಶ್ರದ್ಧೆ, ಜ್ಞಾನದಿಂದ ಕೂಡಿರುವ ಮನಸನ್ನು ಮಲೀನವಾಗದಂತೆ ನೋಡಿಕೊಳ್ಳಲು ದೇವರ ಆರಾಧನೆ ಮುಖ್ಯವಾಗುತ್ತದೆ ಎಂದರು.

ಧರ್ಮದ ಮಾರ್ಗದಲ್ಲಿ ನಡೆದರೆ ಮಾತ್ರ ಮನಸ್ಸಿಗೆ ಶಾಂತಿ ದೊರಕುತ್ತದೆ. ನಮ್ಮ ಪೂರ್ವಜರು ನಂಬಿದ್ದರಿಂದಲೇ ಗುಡಿ ಗೋಪುರಗಳು ನಿರ್ಮಾಣವಾದವು. ಆದ್ದರಿಂದ ನಮ್ಮ ಮನಸ್ಸು ಹಾಗೂ ಆತ್ಮಸಾಕ್ಷಿ ಒಪ್ಪುವ ಜನಪರ ಕೆಲಸಗಳನ್ನು ಮಾಡುತ್ತಾ ಫಲಾಫಲವನ್ನು ಭಗವಂತನಿಗೆ ಬಿಡೋಣ, ಮನುಷ್ಯ ಜನ್ಮ ಅತ್ಯುತ್ತಮವಾಗಿದ್ದು ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ವ್ಯಕ್ತಿಯಾದವನು ದೇವರ ಸ್ಥಾನ ತುಂಬಬಹುದು ಎಂದು ತಿಳಿಸಿದರು.

ನಿಸ್ವಾರ್ಥ ಸೇವೆಯಿಂದ ಬದುಕು ಪ್ರಾರಂಭವಾಗಿ ಯಾವ ಆಪೇಕ್ಷೆ ಇಟ್ಟುಕೊಳ್ಳದೇ ಮಠದ ಮೂಲಕ, ಸ್ವಾಮೀಜಿಗಳ ಮೂಲಕ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕುಂದೂರು ಸುತ್ತಮುತ್ತಲ ಜನ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುತ್ತಿರುವುದರಿಂದ ಕ್ಷೇತ್ರದ ಆಧಿದೇವತೆಗಳು ನಿಮ್ಮನ್ನು ಕಾಯುವ ಕೆಲಸ ಮಾಡುತ್ತಾರೆ ಎಂದು ಹಾರೈಸಿದರು.

ಉಪವಾಸ ವ್ರತ, ಶ್ರೀ ಸುಬ್ರಹ್ಮಣ್ಯೇಶ್ವರ ಷಷ್ಟಿ ರಥೋತ್ಸವದ ಹಿನ್ನಲೆಯಲ್ಲಿ ಈ ಭಾಗದ ಭಕ್ತರು ಉಪವಾಸ ವ್ರತ ಕೈಗೊಳ್ಳುವ ಹಿನ್ನೆಲೆಯಲ್ಲಿ ರಥೋತ್ಸವದ ನಂತರ ಶ್ರೀಗಳು ಅನ್ನ ದಾಸೋಹಕ್ಕೆ ಪೂಜೆ ಸಲ್ಲಿಸಿ ನಂತರ ಶ್ರೀಗಳ ಕೈಯಿಂದ ಪ್ರಸಾದ ಪಡೆದು ಉಪವಾಸ ವೃತ ಸಮಾಪ್ತಿಗೊಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ ಗೌಡರು ಮಾತನಾಡಿ, ಸಂಸಾರಕ್ಕೆ ಸಂಸ್ಕಾರದ ಕೊರತೆ ಉಂಟಾಗಬಾರದು. ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಹೊಸ ದಿಕ್ಕಿನೆಡೆಗೆ ಬೆಳೆಯಬೇಕಾದರೆ ಕುಟುಂಬದ ಸಣ್ಣ ಸಣ್ಣ ಸಂಗತಿಗಳು ಬಿರುಕುಂಟು ಮಾಡುವುದನ್ನು ಕಡಿಮೆ ಮಾಡಬೇಕು. ಇಂದಿನ ಯುಗದಲ್ಲಿ ಹೆಣ್ಣು ಮಕ್ಕಳಿಗೆ ಗೃಹಾಕೃತ್ಯ ಮಾಡುವುದರಲ್ಲಿರುವ ಆನಂದವನ್ನು ಕಲಿಸಬೇಕು ಎಂದರು.

ಶ್ರೀಮಠದ ಹಾಸನ ಮತ್ತು ಕೊಡಗು ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ,, ಶ್ರೀಶೈಲನಾಥ ಸ್ವಾಮೀಜಿ, ಉದ್ಯಮಿ ರಾಜೇಗೌಡ, ಸೇರಿದಂತೆ ದಂಡಿಗನಹಳ್ಳಿ ಹೋಬಳಿಯ ಗ್ರಾಮಗಳ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

error: Content is protected !!