14.2 C
Munich
Home News ಸಕಲೇಶಪುರ: ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ವಾರ್ಷಿಕ ಮಹಾಸಭೆ. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಮುಖ್ಯ –...

ಸಕಲೇಶಪುರ: ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ವಾರ್ಷಿಕ ಮಹಾಸಭೆ. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಮುಖ್ಯ – ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್.

ಸಕಲೇಶಪುರ: ಸಹಕಾರಿ ಕ್ಷೇತ್ರ ಬೆಳೆಯಲು ಪ್ರಾಮಾಣಿಕತೆ ಪಾರದರ್ಶಕತೆ ಮುಖ್ಯ ಎಂದು ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಹೇಳಿದರು. ಶುಕ್ರವಾರ ತಾಲೂಕಿನ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

“ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಡೀ ಜಿಲ್ಲೆಯಲ್ಲಿ ಸ್ವಂತ ಬಂಡವಾಳ ತೊಡಗಿಸಿ ಕೊಳ್ಳುವ ಮೂಲಕ ಉತ್ತಮ ಹೆಸರು ಗಳಿಸಿದೆ. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಹಾಗೂ ರೈತರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯ,” ಎಂದರು.

ರೈತರ ಬೇಡಿಕೆಯ ಮೇರೆಗೆ ಎರಡು ವರ್ಷಗಳ ಹಿಂದೆ 2 ಕೋಟಿ ರೂಪಾಯಿ ಬೆಳೆಸಾಲ ಮತ್ತು 1 ಕೋಟಿ 35 ಲಕ್ಷ ರೂಪಾಯಿ ವ್ಯವಹಾರ ಸಾಲ ನೀಡಲಾಗಿದ್ದು, ರೈತರ ಜೀವನೋಪಾಯ ಸುಧಾರಣೆಗೆ ಸಹಕಾರಿ ಸಂಘ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ನಬಾರ್ಡ್ ಬ್ಯಾಂಕ್ ಮೂಲಕ ರೈತರಿಗೆ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ, ಬೀಜೋಪಚಾರ, ರಸಗೊಬ್ಬರ, ಕೃಷಿ ಸಾಧನ ವಿತರಣೆ ಮುಂತಾದ ಕೃಷಿ ಚಟುವಟಿಕೆಗಳಿಗೆ ಬಹು ಸೇವಾಕೇಂದ್ರಗಳ ಮೂಲಕ ನೆರವು ನೀಡುತ್ತಿದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರವನ್ನು ಸಂಪೂರ್ಣ ಗಣಣೀಕರಣಗೊಳಿಸಲು ಹೆಜ್ಜೆ ಇಟ್ಟಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಶ್ಲಾಘಿಸಿದರು.

ರೈತರಿಗೆ ಆರೋಗ್ಯ ವಿಮೆ ಕುರಿತು ಮಾತನಾಡಿದ ಅವರು, “ಜಿಲ್ಲಾ ಬ್ಯಾಂಕ್ ಪ್ರತಿವರ್ಷ ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ರೈತರಿಗೆ ಆರೋಗ್ಯ ವಿಮೆ ಮಾಡಿಸುತ್ತಿದೆ. ಇದುವರೆಗೆ ಎರಡು ಕೋಟಿ ರೂಪಾಯಿಗೂ ಮಿಕ್ಕಿದಷ್ಟು ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ,” ಎಂದರು.

ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಡಿಮೆ ಬಡ್ಡಿಯಲ್ಲಿ 5 ಲಕ್ಷ ರೂಪಾಯಿಯ ಸಹಾಯವನ್ನು ಸಹಕಾರ ಸಂಘಗಳ ಮೂಲಕ ನೀಡಿದ ಯೋಜನೆಯನ್ನು ಅವರು ಸ್ಮರಿಸಿದರು.

ಡಿ.ಸಿ.ಸಿ ಬ್ಯಾಂಕ್ ಹಾಗೂ ಸಹಕಾರಿ ಹಾಲು ಒಕ್ಕೂಟಗಳು ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಸಹಕಾರ ಚಳವಳಿ ಇನ್ನಷ್ಟು ಬಲವಾಗಿ ಬೆಳೆಯಲು ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು.ಸಂಘದ ಅಧ್ಯಕ್ಷ ಬಿ.ಬಿ ಲೋಕೇಶ್ ಮಾತನಾಡಿ,ನಮ್ಮ ಸಂಘವು ಪ್ರಸಕ್ತ ವರ್ಷದಲ್ಲಿ 13,63.155 ಲಕ್ಷ ಲಾಭ ಗಳಿಸಿದೆ. ಕೃಷಿಯೇತರ ಸಾಲ ವಾಗಿ 5 ಕೋಟಿಗೂ ಹೆಚ್ಚು ಸಾಲ ನೀಡಿದ್ದೇವೆ.

ರೈತರಿಗೆ 2024-25 ಸಾಲಿನಲ್ಲಿ 75 ಲಕ್ಷದಷ್ಟು ರಸಗೊಬ್ಬರ ಒದಗಿಸಲಾಗಿದೆ. ಸಂಘದಿಂದ 360 ಕುಟುಂಬಗಳಿಗೆ ಯಶಸ್ವಿನಿ ಅರೋಗ್ಯ ವಿಮೆ ನೊಂದಣಿ ಮಾಡಲಾಗಿದೆ ಎಂದು ತಿಳಿಸಿದರು.ಈ ವೇಳೆ ಸಂಘದ ವತಿಯಿಂದ ನಡೆಯುತ್ತಿರುವ ನ್ಯಾಯಬೆಲೆ ಅಂಗಡಿಯಲ್ಲಿ ನಡೆದ ಅಕ್ರಮದ ಮತ್ತು ಸಂಘದ ಜಾಗ ಒತ್ತುವರಿ ಕುರಿತು ಸದಸ್ಯರು ಹಾಗೂ ನಿರ್ದೇಶಕರ ನಡುವೆ ಜಟಾಪಟಿ ಏರ್ಪಟ್ಟಿತ್ತು.

ಈ ಸಂಧರ್ಭದಲ್ಲಿ ಸಂಘದಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಚಿಕ್ಕಣ್ಣನವರಿಗೆ ಅಭಿನಂದಿಸಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಉಷಾರಾಣಿ, ನಿರ್ದೇಶಕರುಗಳಾದ ವೈ.ಡಿ ಬಸವರಾಜು, ಬಿ.ಬಿ ಮಂಜುನಾಥ್, ಎಂ.ಎಸ್ ಚಂದ್ರಶೇಖರ್, ಎಂ. ಆರ್ ಉದಯಶಂಕರ್, ನೇತ್ರಾವತಿ,ಉದೀಶ್, ರಾಜೇಶ್ ಕೃಷ್ಣಮೂರ್ತಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೂಪ,ಸಿಬ್ಬಂದಿಗಳಾದ ಮಮತಾ ಮಲ್ಲಿಕಾರ್ಜುನ್, ವಿಶ್ವನಾಥ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!